

ಕೆ.ಆರ್.ಪೇಟೆ: ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಕ್ಷ ರಾಜಕಾರಣ ಮಾಡದೆ 120 ಕೋಟಿ ರೂ. ಅನುದಾನ ನೀಡಿದೆ ಎಂದು ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಿಂದ ತಾಲೂಕಿನ 63 ಕೆರೆಗಳು ಹೇಮಾವತಿ ನೀರಿನಿಂದ ತುಂಬಲಿದ್ದು, ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಈ ಯೋಜನೆಯ ಮೂಲಕ ನಾಗಮಂಗಲ ಕ್ಷೇತ್ರಕ್ಕೂ ಹೇಮೆಯ ನೀರನ್ನು ತೆಗೆದುಕೊಂಡು ಹೋಗಲು 80 ಕೋಟಿ ರೂ. ಅನುದಾನದ ಅಗತ್ಯವಿದ್ದು ಶೀಘ್ರದಲ್ಲಿಯೇ ಅದನ್ನು ಬಿಡುಗಡೆ ಮಾಡಲಾಗುವುದು. ಇದಲ್ಲದೆ ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಗಳ ಮೂಲಕ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 120 ಕೋಟಿ ರೂ. ಅನುದಾನ ನೀಡಲಾಗಿದೆ ಎಂದ ಸಚಿವರು ಕೆ.ಆರ್.ಪಟ್ಟಣದ ಹೇಮಾವತಿ ಬಡಾವಣೆಯ 582 ನಿವೇಶನಗಳ ಅಕ್ರಮ ಸಕ್ರಮಕ್ಕೆ ಕ್ರಮ ವಹಿಸಲಾಗುವುದು. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸಾರ್ವಜನಿಕ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಿಸಲು ಕ್ರಮ ವಹಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಕಾರ್ಯಕರ್ತರು ಸಾರ್ವಜನಿಕ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹರಿಸಲು ಮುಂದಾಗುವಂತೆ ಸೂಚಿಸಿದರು.
ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ಇಲ್ಲಿನ ಕಾರ್ಯಕರ್ತರನ್ನು ಕಾಡುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. 2028 ರ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರಬೇಕು ಎನ್ನುವುದು ನನ್ನ ಗುರಿ. ಪಕ್ಷದ ಕಾರ್ಯಕರ್ತರು ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಶ್ರಮಿಸಬೇಕು. ಕಾರ್ಯಕರ್ತರಿಗೆ ಅಗತ್ಯವಾದ ಶಕ್ತಿ ತುಂಬುವ ಕೆಲಸವನ್ನು ಸಚಿವನಾಗಿ ನಾನು ಮಾಡುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ನೀಗಲಿದೆ ಎಂದು ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ರಾಜಕಾರಣ ಒಂದು ರೀತಿಯಲ್ಲಿ ಮದಿರೆಯ ನಶೆ ಇದ್ದಂತೆ. ಒಮ್ಮೆ ಮೈಗತ್ತಿಸಿಕೊಂಡರೆ ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ರಾಜಕಾರಣವನ್ನು ಬಲವಂತವಾಗಿ ಕಲಿಸಲು ಸಾಧ್ಯವಿಲ್ಲ. ಕಾರ್ಯಕರ್ತರು ಸ್ವಯಂ ಸೇವಕರಂತೆ ಜನರ ನಡುವೆ ನಿಂತು ಕೆಲಸ ಮಾಡಿದಾಗ ಮಾತ್ರ ಅವರಿಗೆ ನಾಯಕತ್ವ ಸಿಗುತ್ತದೆ. ನನ್ನ ಇತಿಮಿತಿಯಲ್ಲಿ ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಕಡೆಯಿಂದಲೂ ಕೆಲವು ತಪ್ಪುಗಳಾಗಿರಬಹುದು. ಜನರ ಗುಂಪಿನ ನಡುವೆ ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅದು ನನ್ನ ಕಿವಿಗೆ ಮುಟ್ಟುವುದಿಲ್ಲ. ನನ್ನ ಸಮಯದ ಸೂಕ್ಷ್ಮತೆ ಅರಿತು ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರೆ ಅದನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ನಮ್ಮ ಪಕ್ಷದ ಇಬ್ಬರು ಮಾಜಿ ಶಾಸಕರು, ಒಬ್ಬರು ಪರಾಜಿತ ಅಭ್ಯರ್ಥಿ ಸೇರಿದಂತೆ ಹಲವು ನಾಯಕರಿದ್ದಾರೆ. ಸ್ಥಳೀಯ ನಾಯಕರು ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದ ಸಚಿವರು, ಕ್ಷೇತ್ರದಲ್ಲಿ ಶಾಸಕರಿಲ್ಲದಿರುವುದರಿಂದ ನಮ್ಮ ಕಾರ್ಯಕರ್ತರಿಗೆ ನಷ್ಟವಾಗಿರಬಹುದು. ಆದರೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ನಮ್ಮ ಸರ್ಕಾರದ ಎಲ್ಲ 5 ಗ್ಯಾರಂಟಿ ಯೋಜನೆಗಳು ಪಕ್ಷಾತೀತವಾಗಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ಜನರಿಗೆ ಸಮಾನವಾಗಿ ತಲುಪುತ್ತಿವೆ ಎಂದರು.
ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿ:
ಇತ್ತೀಚೆಗೆ ನಡೆದ ಮನ್ ಮುಲ್ ಚುನಾವಣೆಯಲ್ಲಿ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಇರಲಿಲ್ಲ. ಅದ್ದರಿಂದ ನಾವು ಅನಿವಾರ್ಯವಾಗಿ ಶಾಸಕ ಎಚ್.ಟಿ.ಮಂಜು ವಿರುದ್ಧ ಸ್ಪರ್ಧಿಸಿದ್ದ ಡಾಲು ರವಿ ಮತ್ತು ಎಂಬಿ.ಹರೀಶ್ ಅವರನ್ನು ಬೆಂಬಲಿಸಿ ಗೆಲ್ಲಿಸಿಕೊಳ್ಳಬೇಕಾಯಿತು. ಇವರಿಬ್ಬರಿಗೂ ಕಾಂಗ್ರೆಸ್ ಸೇರುವಂತೆ ಸೂಚಿಸಿದ್ದೇನೆ. ಇದರಲ್ಲಿ ಒಬ್ಬರು ಪಕ್ಷ ಸೇರ್ಪಡೆಗೆ ಸಕಾರಾತ್ಮವಾಗಿದ್ದರೆ ಮತ್ತೊಬ್ಬರು ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿಲ್ಲ. ಇವರಿಗೆ ಕಾಲಾವಕಾಶ ನೀಡಿದ್ದೇನೆ. ಇವರು ನಿಗದಿತ ಅವಧಿಯಲ್ಲಿ ಪಕ್ಷಕ್ಕೆ ಬಂದರೆ ಒಂದು ಬಹಿರಂಗ ಸಭೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇನೆ ಎಂದು ಚಲುವರಾಯಸ್ವಾಮಿ ಪ್ರಕಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಹೇಮಾವತಿ ಜಲಾಶಯದಿಂದ ತಾಲೂಕಿನ ನಾಲೆಗಳಿಗೆ ಒಂದು ಕಂತು ನೀರು ಬಿಡಿಸಿಕೊಡಬೇಕು. ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹೇಮಾವತಿ ಬಡಾವಣೆಯ 582 ನಿವೇಶನಗಳ ಸಕ್ರಮಾತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ರಮೆಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು, ವಿಜಯರಾಮೇಗೌಡ, ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ನಾಗೇಂದ್ರಕುಮಾರ್ ಇದ್ದರು.