

ನಂಜನಗೂಡು: ನಂಜನಗೂಡು ಪಟ್ಟಣ ಅಭಿವೃದ್ಧಿಗೆ ನಗರಸಭೆ ನಿಧಿಯಿಂದ 7.5 ಕೋಟಿ ರೂ. 15ನೇ ಹಣಕಾಸು ನಿಧಿಯಿಂದ 3 ಕೋಟಿ ರೂ., ಎಸ್‌ಎಫ್‌ಸಿ ನಿಧಿಯಿಂದ 50 ಲಕ್ಷ ರೂ. ಹಾಗೂ ಇತರ ಉಳಿಕೆ ಅನುದಾನದಿಂದ 1 ಕೋಟಿ ರೂ.ಸೇರಿ ಒಟ್ಟು 12 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಗರಸಭೆ ಅನುಮೋದನೆ ನೀಡಿತು.
ನಂಜನಗೂಡು ನಗರಸಭೆ ಕಚೇರಿಯಲ್ಲಿ ಮಂಗಳವಾರ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ 46 ವಿಷಯಗಳ ಕುರಿತು ಸದಸ್ಯರು ಸುದೀರ್ಘವಾಗಿ ಚರ್ಚೆ ನಡೆಸಿದರು.
ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, 31 ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ತಲಾ 10 ಲಕ್ಷ ರೂ.ಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಯುಕ್ತ ವಿಜಯ್‌ಕುಮಾರ್ ಮಾತನಾಡಿ, ನಂಜನಗೂಡಿನ ಆರ್.ಪಿ. ರಸ್ತೆಯ ಭಾಗದಲ್ಲಿ ಪ್ರಾರಂಭವಾಗಲಿರುವ ಮೇಲ್ಸೇತುವೆ ಗೆ ಸಂಬಂಧಪಟ್ಟಂತೆ ವಿಸ್ತೃತವಾಗಿ ಚರ್ಚೆ ನಡೆಸಿ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಆರ್.ಪಿ. ಮತ್ತು ಎಂ.ಜಿ.ಎಸ್.ರಸ್ತೆಗಳಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷ ರೇಹಾನ ಬಾನು, ವ್ಯವಸ್ಥಾಪಕ ಹೇಮಕುಮಾರ್, ಪರಿಸರ ಇಂಜಿನಿಯರ್ ಮೈತ್ರಾದೇವಿ, ಕಂದಾಯ ಅಧಿಕಾರಿ ಜೆಸ್‌ಪಾಲ್‌ಸಿಂಗ್, ಎಇಇ ಸಮಂತ್, ಪ್ರೀತಂ, ಮಹೇಶ್, ನಂದಿನಿ, ಪಾಟಲಿಂಗಪ್ಪ, ಆದರ್ಶ್, ರೇಖಾ, ಶಫಿ, ರಮೇಶ್, ಮಂಜು, ಮಹೇಶ್, ರಾಜೇಶ್, ಕುಮಾರ ಇತರರು ಇದ್ದರು.