ಅಕ್ರಮ ಮದ್ಯ ಮಾರಿದರೆ 10,001 ರೂ. ದಂಡ

13-KGL-1
Published on

ಕೊಳ್ಳೇಗಾಲ: ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 10,001 ರೂ. ದಂಡ, ಮಾರಿದವರನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟರೆ 5 ಸಾವಿರ ರೂ. ಬಹುಮಾನ ಅಂತೆ. ಇದು ಸರ್ಕಾರದಿಂದಾಗಲಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯಿಂದಾಗಲಿ ಘೋಷಣೆ ಮಾಡಿರುವ ಬಹುಮಾನವಲ್ಲ. ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲೆಂದು ಸ್ಥಳೀಯರೇ ಹಾಕಿಕೊಂಡಿರುವ ನಿಬಂಧನೆ.

ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಬಡಾವಣೆಯ ಪರಿಶಿಷ್ಟ ಜಾತಿ, ಜನಾಂಗದ ಯಜಮಾನರು ಹಾಗೂ ಮುಖಂಡರು ಬಡಾವಣೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮದ್ಯ ತಡೆಗಟ್ಟಲು ಅವರೇ ಮಾಡಿಕೊಂಡ ತೀರ್ಮಾನ.

ಮದ್ಯ ಅಕ್ರಮ ಮಾರಾಟದ ಜಾಲ ಸಮಾಜಕ್ಕೆ ಅಂಟಿಕೊಂಡ ಪಿಡುಗಾಗಿ ಬಾಧಿಸುತ್ತಿದೆ. ಕಿರಾಣಿ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು ಹಾಗೂ ಮನೆಗಳಲ್ಲಿಯೇ ಮದ್ಯ ಸಂಗ್ರಹಿಸಿಟ್ಟು ಹಣದಾಸೆಗೆ ಹೆಚ್ಚಿನ ಬೆಲೆಗೆ ಸ್ಥಳೀಯವಾಗಿ ಮಾರಾಟ ಮಾಡಿ ಯುವಕರು, ವಯಸ್ಕರು ಮದ್ಯ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ತಡೆಗಟ್ಟಲು ಈ ಬಡಾವಣೆಯ ಯಜಮಾನರು, ಮುಖಂಡರು ಚರ್ಚಿಸಿ ನಿರ್ಧಾರ ಕೈಗೊಂಡು ಮನೆ ಮನೆಗೆ ಅರಿವು ಮೂಡಿಸುವ ಸಲುವಾಗಿ ಕರಪತ್ರಗಳನ್ನು ಹಂಚಿದ್ದಾರೆ.

ಮುಡಿಗುಂಡ ಬಡಾವಣೆಯಲ್ಲಿ ಸುಮಾರು 4 ರಿಂದ 5 ಸಾವಿರ ಜನರಿದ್ದಾರೆ. ಪರಿಶಿಷ್ಟ ಜಾತಿ, ನಾಯಕರು, ಲಿಂಗಾಯತರು, ಕುಂಬಾರರು, ಸವಿತಾ ಸಮಾಜ, ಕುರುಬ ಸಮುದಾಯ ಇನ್ನಿತರ ಸಮುದಾಯ ಜನರು ವಾಸವಿದ್ದಾರೆ. ಇವರಲ್ಲಿ 1500 ಸಾವಿರ ಜನರು ಪರಿಶಿಷ್ಟ ಜಾತಿ ಜನರಿದ್ದಾರೆ. ಕೃಷಿ, ರೇಷ್ಮೆ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಹಾಗೂ ಗಾರೆ ಕೆಲಸವೇ ಇವರ ಬದುಕಿನ ಆದಾಯದ ಮೂಲವಾಗಿದೆ. ಆದರೆ ಪರಿಶಿಷ್ಟ ಜಾತಿ ಜನಾಂಗದ ಬೀದಿಯಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟದಿಂದ ಕೂಲಿ ಕಾರ್ಮಿಕರು ವಿಪರೀತ ಮದ್ಯ ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳುವುದಲ್ಲದೆ, ಕೌಟುಂಬಿಕ ಕಲಹಕ್ಕೂ ಕಾರಣ ವಾಗಿತ್ತು. ಕೂಲಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕುತ್ತಿದ್ದರು. ಯುವಕರು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದರು. ಇದನ್ನೆಲ್ಲ ಮನಗಂಡ ಯಜಮಾನರು ಬಡಾವಣೆಯಲ್ಲಿ ಮದ್ಯ ಅಕ್ರಮಕ್ಕೆ ಬ್ರೇಕ್ ಹಾಕಲು ಕ್ರಮವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net