ಮಳಿಗೆಗೆ 100 ರೂ. ಬಾಡಿಗೆ!

06 KLR 02
Published on

ಕೋಲಾರ: ನಗರದ ಎಸ್​.ಎನ್​.ಆರ್​. ಆಸ್ಪತ್ರೆ ಆವರಣದಲ್ಲಿರುವ ಮಳಿಗೆಗಳನ್ನು ಕಡಿಮೆ ಬಾಡಿಗೆಗೆ ಪಡೆದು ಬೇರೊಬ್ಬರಿಗೆ ಸಾವಿರಾರು ರೂ.ಗೆ ಬಾಡಿಗೆ ನೀಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು. ವಿಜಯವಾಣಿ ಅಧಿಕಾರಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ನಿಯಮಾನುಸಾರ ಹೊಸ ದರ ನಿಗದಿಪಡಿಸಲು ಮುಂದಾಗಿದ್ದಾರೆ.

ಆಸ್ಪತ್ರೆ ಆವರಣದಲ್ಲಿ 10 ಚಿಲ್ಲರೆ ಅಂಗಡಿಗಳು ಮತ್ತು 1 ನಂದಿನಿ ಪಾರ್ಲರ್​ ಇದ್ದು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವರು ಮತ್ತು ಹೊರಗಿನವರ ಪ್ರಭಾವ ಬಳಸಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಪ್ರತಿ ಅಂಗಡಿಗೆ ಮಾಸಿಕ ಕೇವಲ 100 ರೂ.ನಿಂದ 3,500 ರೂ.ವರೆಗೆ ಬಾಡಿಗೆ ನಿಗದಿಪಡಿಸಿಕೊಂಡು ಬೇರೊಬ್ಬರಿಗೆ 30 ರಿಂದ 35 ಸಾವಿರ ರೂ.ಗಳಂತೆ ಬಾಡಿಗೆ ವಸೂಲಿ ಮಾಡುತ್ತಿದ್ದರು.

ಈ ಬಗ್ಗೆ ವಿಜಯವಾಣಿ ಅಂಗಡಿಗಳ ಬಾಡಿಗೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದಾಗ ಅಧಿಕಾರಿಗಳು ಮಾಹಿತಿ ನೀಡಲಿಲ್ಲ. ಜಿಲ್ಲಾ ಸರ್ಜನ್​ ಜಗದೀಶ್​, "ನಾನು ಹೊಸದಾಗಿ ಬಂದಿರುವುದು, ಇನ್ನೂ ಇದರ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ' ಎಂದು ನುಣುಚಿಕೊಂಡರು.

ಈ ಮೇರೆಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಆ.1ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು ವರ್ಷಗಳ ಹಿಂದೆ ಅಂಗಡಿಗಳನ್ನು ಬಾಡಿಗೆ ಕರಾರು ಮಾಡಿಕೊಂಡು ಹಳೆಯ ದರದಲ್ಲಿಯೇ ಹಣ ಕಟ್ಟುತ್ತಿದ್ದಾರೆ ಎಂಬ ವಿಷಯವನ್ನು ಜಿಲ್ಲಾ ಸರ್ಜನ್​ ಪ್ರಸ್ತಾಪಿಸಿದರು. ಲೋಕೋಪಯೋಗಿ ಇಲಾಖೆಯವರನ್ನು ಕರೆಸಿ ಅಂಗಡಿಗಳ ಅಳತೆಯ ಪ್ರಕಾರ ಈಗಿನ ಹೊಸ ದರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಎಂ.ಆರ್​.ರವಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೊಸ ದರ ನಿಗದಿಪಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಅಂಗಡಿಗಳ ಅಳತೆಗೆ ತಕ್ಕಂತೆ ಇಲಾಖೆ ದರ ನಿಗದಿಪಡಿಸಲಿದೆ. ಈ ಹಿಂದೆ ಇದ್ದವರು ಯಾರು ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಈಗ ಹೊಸ ದರ ನಿಗದಿಪಡಿಸಲಾಗುವುದು.

 -ಡಾ.ಜಗದೀಶ್​

ಜಿಲ್ಲಾ ಸರ್ಜನ್​, ಕೋಲಾರ.

ಆಸ್ಪತ್ರೆ ಆವರಣದಲ್ಲಿರುವ ಅಂಗಡಿಗಳಲ್ಲಿ ಉತ್ತಮ ವಹಿವಾಟು ನಡೆಯುತ್ತದೆ. ಆದರೆ, ಆಡಳಿತ ಮಂಡಳಿ ಪ್ರತಿ ಅಂಗಡಿಗೆ 100 ರೂ.ಬಾಡಿಗೆ ಪಡೆಯುತ್ತಿರುವುದು ದುರಾದೃದೃಷ್ಟಕರ. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಅಂಗಡಿಗಳನ್ನು ಹರಾಜು ಹಾಕಬೇಕು. ಇಲ್ಲವಾದರೆ ಆಸ್ಪತ್ರೆ ವಿರುದ್ಧ ಹೋರಾಟ ಮಾಡಲಾಗುವುದು.

 -ಸೋಮಣ್ಣ

ಅಧ್ಯಕ್ಷ ಕರವೇ ಸಮರಸೇನೆ

ಆಸ್ಪತ್ರೆ ಆವರಣದಲ್ಲಿ ತೆರೆದಿರುವ ಅಂಗಡಿಗಳಲ್ಲಿ ಖಾಸಗಿ ಆಂಬುಲೆನ್ಸ್​ ಚಾಲಕರು, ಆಸ್ಪತ್ರೆಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿ ಅಲ್ಲಿಯೇ ಕುಳಿತು ಎಲ್ಲ ರೀತಿಯ ವ್ಯವಹಾರಗಳು ನಡೆಸುತ್ತಾರೆ. ಆದ್ದರಿಂದ ಅಲ್ಲಿ ನಡೆಸಲಾಗುತ್ತಿರುವ ಪ್ರಭಾವಿಗಳ ಅಂಗಡಿಗಳ ಮಾಲೀಕತ್ವ ಹಿಂಪಡೆದು ಬಡವರಿಗೆ ನೀಡಿದರೆ ಆಸ್ಪತ್ರೆಗೆ ಆದಾಯವೂ ಬರುತ್ತದೆ. ಅಂಗಡಿಗಳವರು ಇಷ್ಟ ಬಂದ ರೀತಿಯಲ್ಲಿ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

 -ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net