ಮುದ್ದೇಬಿಹಾಳ ಕ್ಷೇತ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ

Rs 100 crore grant for the development of Muddebihal constituency
ಮುದ್ದೇಬಿಹಾಳ ಅಂಬೇಡ್ಕರ್ ಭವನದಲ್ಲಿ 1.50 ಕೋಟಿ ರೂ. ಅನುದಾನದ ಉಗ್ರಾಣ ಕೊಠಡಿ, ಕಿಚನ್ ಬ್ಲಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎಸ್. ನಾಡಗೌಡ ಭೂಮಿಪೂಜೆ ನೆರವೇರಿಸಿದರು. ಮಹಿಬೂಬ ಗೊಳಸಂಗಿ, ಗುರು ತಾರನಾಳ, ಪ್ರತಿಭಾ ಅಂಗಡಗೇರಿ, ಶಾಜಾದಬಿ ಹುಣಚಗಿ, ಗೋಪಿ ಮಡಿವಾಳರ ಇತರರಿದ್ದರು.
Published on

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ದೇಬಿಹಾಳ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನದ ಯೋಜನೆಗಳಿಗೆ ಅನುಮೋದನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳ ಸಚಿವರನ್ನು ಕರೆಸಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಗುವುದೆಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ 1.50 ಕೋಟಿ ರೂ. ವೆಚ್ಚದಲ್ಲಿ ಉಗ್ರಾಣ ಕೊಠಡಿ, ಕಿಚನ್ ಬ್ಲಾಕ್ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಭವನ ನವೀಕರಣ ಸೇರಿ ಹಲವು ಉಪಯುಕ್ತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಹಿಂದೆ ನಾನು ಶಾಸಕನಾಗಿದ್ದಾಗ ಅಂಬೇಡ್ಕರ್ ಭವನಕ್ಕೆ 1 ಕೋಟಿ ರೂ. ಅನುದಾನ ಕೊಡಿಸಿದ್ದೆ. ಆದರೆ, ನಂತರದಲ್ಲಿ ಅದು ಡೈವರ್ಟ್ ಆಯಿತು. ಅಂಬೇಡ್ಕರ್ ಭವನ ಬಡವರಿಗೆ, ಸರ್ಕಾರಿ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಅಂಬೇಡ್ಕರ್ ಅವರನ್ನು ನಾನು ಕ್ರಾಂತಿಕಾರಿ ಶರಣರ ಸಾಲಿಗೆ ಸೇರಿಸುತ್ತೇನೆ. ಅವರು ಒಂದೇ ಸಮುದಾಯಕ್ಕೆ ಸೀಮಿತರಲ್ಲ ಎಂದರು.

ಈಗಾಗಲೇ ಸರ್ಕಾರ ಮುದ್ದೇಬಿಹಾಳ ಪುರಸಭೆಗೆ 8 ಕೋಟಿ ರೂ., ತಾಳಿಕೋಟೆ ಪುರಸಭೆಗೆ 7 ಕೋಟಿ ರೂ., ನಾಲತವಾಡ ಪಟ್ಟಣ ಪಂಚಾಯಿತಿಗೆ 5 ಕೋಟಿ ರೂ. ಸೇರಿ 20 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಮುದ್ದೇಬಿಹಾಳ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಗೆ 32 ಕೋಟಿ ರೂ., ಒಳಚರಂಡಿ ವ್ಯವಸ್ಥೆ ಬಲಪಡಿಸಲು 34 ಕೋಟಿ ರೂ.ಗೆ ಅನುಮತಿ ಪಡೆದುಕೊಳ್ಳಲಾಗಿದೆ. ಪಟ್ಟಣದ ಮುಖ್ಯ ಬಜಾರ್‌ನಲ್ಲಿ ಈಗಾಗಲೇ ನೆಲಸಮಗೊಳಿಸಲಾಗಿರುವ ವಾಣಿಜ್ಯ ಮಳಿಗೆ ಕಟ್ಟಡಕ್ಕೆ 15 ಕೋಟಿ ರೂ. ಅನುದಾನ ಕೇಳಿದ್ದೇವೆ. 5 ಕೋಟಿ ಸಿಗುವ ವಿಶ್ವಾಸ ಇದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹೆಚ್ಚಿನ ಅನುದಾನ ಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಮಳಿಗೆ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸ್ವಂತ ಕಚೇರಿ ಕಟ್ಟಡ ಇಲ್ಲ. ಇವೆರಡೂ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಿಕೊಡುವ ಸಂಕಲ್ಪ ನನ್ನದು. ತಹಸೀಲ್ದಾರ್ ಕಚೇರಿ ಪಕ್ಕದಲ್ಲೇ ಇವುಗಳ ಸ್ವತಂತ್ರ ಕಚೇರಿ ಇದ್ದರೆ ಹೆಚ್ಚು ಅನುಕೂಲ ಎಂದರು.

ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕೆಆರ್‌ಐಡಿಎಲ್‌ನ ಎಇಇ ಆನಂದ ಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ, ಮುಖಂಡರಾದ ಸುರೇಶ ಕಲಾಲ, ಗೋಪಿ ಮಡಿವಾಳರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net