ಕುಂದಾಪುರ ಸೀವಾಕ್‌ಗೆ 10 ಲಕ್ಷ ರೂ. ಮಂಜೂರು

gan-1
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಅಪಾಯಕ್ಕೆ ಸಿಲುಕಿದ್ದ ಕುಂದಾಪುರದ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಬಂದರಿನ ಬ್ರೇಕ್ ವಾಟರ್ ತಡೆಗೋಡೆ ದುರಸ್ತಿಗೆ ಕೊನೆಗೂ ರಾಜ್ಯ ಸರ್ಕಾರ 10 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ.

ಕಳೆದ ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ನಲುಗಿದ್ದ ಕೋಡಿ ಸೀವಾಕ್ ತಡೆಗೋಡೆ ಮತ್ತು ಬ್ರೇಕ್‌ವಾಟರ್ ತಡೆಗೋಡೆ ಬುಡದಲ್ಲಿದ್ದ ಕಲ್ಲುಗಳು, ವಿಶಿಷ್ಟ ವಿನ್ಯಾಸದ ಕಾಂಕ್ರಿಟ್ ಸ್ಲಾಬ್‌ಗಳು ಕೆಳಗಡೆ ಜಾರಿದ್ದವು. ಗೋಡೆ ರಕ್ಷಣೆಗೆಂದು ಸುತ್ತಲೂ ಅಳವಡಿಸಿದ್ದ ಟೆಟ್ರಾಫೋಡ್ ಕೆಳಕ್ಕೆ ಜಾರಿದ ಪರಿಣಾಮ ತಡೆಗೋಡೆಯಲ್ಲಿ ಬಿರುಕುಂಟಾಗಿ, ತಡೆಗೋಡೆ ಮೇಲೆ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ಮತ್ತು ತಡೆಗೋಡೆ ನಡುವೆ ಕಂದಕ ನಿರ್ಮಾಣವಾಗಿತ್ತು.

ಇತ್ತೀಚೆಗೆ ನಡೆದ ಸದನದಲ್ಲಿ ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಗಂಟಿಹೊಳೆ ಬ್ರೇಕ್‌ವಾಟರ್ ತಡೆಗೋಡೆ ಕುಸಿತ ಸಮಸ್ಯೆ ಕುರಿತು ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದರು. ಸ್ಥಳೀಯ ಮೀನುಗಾರರ, ಜನಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕೋಡಿ ಹಾಗೂ ಗಂಗೊಳ್ಳಿ ಭಾಗದ ಬ್ರೇಕ್‌ವಾಟರ್ ತಡೆಗೋಡೆಗೆ ತಲಾ 10 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ. ಕೋಡಿಯಲ್ಲಿ ತಡೆಗೋಡೆ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗಂಗೊಳ್ಳಿಯಲ್ಲಿ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

102 ಕೋಟಿ ರೂ.ವೆಚ್ಚದ ಕಾಮಗಾರಿ

2016ರಲ್ಲಿ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ನಿರ್ಮಾಣ ಆರಂಭಗೊಂಡು ಕೋಡಿ ಭಾಗದಿಂದ 900 ಮೀ. ಪಶ್ಚಿಮಕ್ಕೆ ಮತ್ತು ಗಂಗೊಳ್ಳಿ ಭಾಗದಿಂದ 750 ಮೀ. ಪಶ್ಚಿಮಕ್ಕೆ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆದಿತ್ತು. ಕೋಡಿಯಲ್ಲಿ ಬ್ರೇಕ್ ವಾಟರ್ ತಡೆಗೋಡೆಯನ್ನೇ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸೀವಾಕ್ ಆಗಿ ಪರಿವರ್ತಿಸಿದೆ. ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅಂದಾಜು 1.5 ಕಿ.ಮೀ. ಉದ್ದದ ಸೀವಾಕ್ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಕೋಡಿ ಮತ್ತು ಗಂಗೊಳ್ಳಿಯ ಬ್ರೇಕ್‌ವಾಟರ್ ತಡೆಗೋಡೆ ದುರಸ್ತಿಗದೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದ್ದು, ಕೋಡಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ನಂತರ ಗಂಗೊಳ್ಳಿ ಬ್ರೇಕ್ ವಾಟರ್ ತಡೆಗೋಡೆ ದುರಸ್ತಿ ಕಾರ್ಯ ಆರಂಭಿಸಲಾಗುವುದು.

ದಿನೇಶ್ ಕುಮಾರ್ ಕಲ್ಲೇರ್, ನಿರ್ದೇಶಕ, ರಾಜ್ಯ ಮೀನುಗಾರಿಕೆ ಇಲಾಖೆ

ಪಾಯಿಂಟ್ಸ್

*ಕಳೆದ ವರ್ಷದ ಮಳೆಗಾಲದಲ್ಲಿ ಎರಡೂ ಕಡೆ ಹಾನಿಯಾಗಿತ್ತು *ಸದನದಲ್ಲಿ ದನಿ ಎತ್ತಿದ್ದ ಕ್ಷೇತ್ರದ ಶಾಸಕರು * ಬೇಡಿಕೆಗೆ ಸರ್ಕಾರ ಸ್ಪಂದನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net