

ಬೆಂಗಳೂರು: ಹೊಸ ಆರ್ಥಿಕ ವರ್ಷ ಶುರುವಾಗಿ ತಿಂಗಳು ಮುಗಿಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ, ಬಿಯರ್ ಪ್ರಿಯರರಿಗೆ ದರ ಏರಿಕೆ ಶಾಕ್ ಕೊಟ್ಟಿದ್ದು, ಪ್ರತಿ ಬಾಟಲ್ ಬಿಯರ್ ಮೇಲೆ 10-20 ರೂ. ಹೆಚ್ಚಳ ಮಾಡಿದೆ.
ಅಲ್ಲದೆ, ಬಿಯರ್ ಮೇಲಿನ ಎಇಡಿ ಏರಿಕೆ ಮೂಲಕ ಪರೋಕ್ಷವಾಗಿ ಐಎಂಎಲ್ ಮಾರಾಟ ಹೆಚ್ಚಿಸಲು ಮುಂದಾಗಿದೆ. ಅಬಕಾರಿ ಇಲಾಖೆಯಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಐಎಂಎಲ್ ಸಿಂಹಪಾಲು ಹೊಂದಿವೆ. ಆದರೆ, ಬಿಯರ್ ಮಾರಾಟದಿಂದ ಹೆಚ್ಚಿನ ಆದಾಯವಿಲ್ಲ. ಐಎಂಎಲ್ ಮಾರಾಟ ಜಾಸ್ತಿಯಾದರೆ ದುಪ್ಪಟ್ಟು ಆದಾಯ ಬರುತ್ತದೆ. ಈ ಕಾರಣಕ್ಕೆ ಸರ್ಕಾರ, ಬಿಯರ್ ಮಾರಾಟ ನಿರುತ್ತೇಜನಗೊಳಿಸಿ ಐಎಂಎಲ್ ಮಾರಾಟ ಹೆಚ್ಚಳ ಪ್ರೋತ್ಸಾಹಿಸುತ್ತಿದೆ.
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಶೇ.10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ ಸರ್ಕಾರ, ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರಿಗೆ ಆೇಪಣೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಿದೆ. ರಾಜ್ಯದಲ್ಲಿ ಸದ್ಯ ಬಿಯರ್ ಮೇಲಿನ ಎಇಡಿಯು ಉತ್ಪಾದನಾ ವೆಚ್ಚದ ಶೇ.195ರಷ್ಟಿದೆ. ಇದೀಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.205ಕ್ಕೆ ಹೆಚ್ಚಿಸುವ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೆಖಿಸಲಾಗಿದೆ. ಇದರೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರ್ಯಾಂಡ್ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 10ರಿಂದ 20 ರೂ. ಏರಿಕೆ ಆಗಬಹುದೆಂದು ಅಂದಾಜಿಸಲಾಗಿದೆ. ಒಟ್ಟಾರೆ ಎಇಡಿ ಹೆಚ್ಚಳದ ನಂತರ ಪ್ರೀಮಿಯಂ ಬ್ರ್ಯಾಂಡ್ ಬಿಯರ್ ದರ ಬಾಟಲಿಗೆ 10-20 ರೂ.ಏರಿಕೆಯಾಗಬಹುದು. ಮಧ್ಯಮ ಶ್ರೇಣಿಮತ್ತು ಅಗ್ಗದ ಸ್ಥಳಿಯ ಬ್ರ್ಯಾಂಡ್ಬಿಯರ್ ದರ 5 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಲೆ ಏರಿಕೆಯು ಬ್ರ್ಯಾಂಡ್ನಿಂದ ಬ್ರ್ಯಾಂಡ್ಗೆ ವ್ಯತ್ಯಾಸವಾಗಲಿದೆ. ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಬ್ರ್ಯಾಂಡ್ ಬಿಯರ್ ಬೆಲೆಯು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
3ನೇ ಬಾರಿಗೆ ದರ ಏರಿಕೆ: ಕರಡು ಅಧಿಸೂಚನೆಯಲ್ಲಿನ ಪ್ರಸ್ತಾವಿತ ಎಇಡಿ ಹೆಚ್ಚಳದೊಂದಿಗೆ 2 ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು 4ನೇ ಬಾರಿಗೆ ಏರಿಕೆ ಮಾಡಿದಂತಾಗಲಿದೆ. 2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175ರಿಂದ ಶೇ.185ಕ್ಕೆ ಹೆಚ್ಚಿಸಿತ್ತು. ನಂತರ 2025ರ ಜ.20ರಂದು ಬಜೆಟ್ಗೂ ಮುನ್ನವೇ ಮತ್ತೊಮ್ಮೆ ಎಇಡಿ ಪರಿಷ್ಕರಣೆ ಮಾಡಲಾಗಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185ರಿಂದ ಶೇ.195ಕ್ಕೆ (ಪ್ರತಿ ಬಲ್ಕ್ ಲೀಟರ್ಗೆ ರೂ.130ರವರೆಗೆ) ಹೆಚ್ಚಿಸಲಾಗಿತ್ತು. ಇದೀಗ ಸರಕಾರಕ್ಕೆ ಮೂರನೇ ಬಾರಿಗೆ ತೆರಿಗೆ ಹೆಚ್ಚಳ ಮಾಡಲು ಮುಂದಾಗಿದೆ. ಮೂಲ ಅಬಕಾರಿ ಸುಂಕವನ್ನು ಸಹ ಪರಿಷ್ಕರಿಸಲಾಗಿದೆ. ರೇಟ್ ಬದಲಿಗೆ, ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿದ ಶ್ರೇಣಿಕೃತ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಶೇ.5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್ ಪ್ರಮಾಣ ಹೊಂದಿರುವ ಬಿಯರ್ಗೆ ಪ್ರತಿ ಬಲ್ಕ್ ಲೀ.ಗೆ 12 ರೂ. ಮತ್ತು ಶೇ.5ರಿಂದ ಶೇ.8ರಷ್ಟು ಆಲ್ಕೋಹಾಲ್ ಹೊಂದಿರುವ ಬಿಯರ್ಗೆ 20 ರೂ. ನಿಗದಿಪಡಿಸಲಾಗಿದೆ.
ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ಎಇಡಿ: ಹಿಂದೆ ರಾಜ್ಯದಲ್ಲಿ ಬಿಯರ್ಗೆ 2 ಹಂತದ ಎಇಡಿ ವ್ಯವಸ್ಥೆಯಿತ್ತು. ಕೆಳ ಹಂತದ ಬ್ರ್ಯಾಂಡ್ಗಳ ಬಿಯರ್ ಲೀಟರ್ಗೆ 130 ರೂ.ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಇತರೆ ಬ್ರ್ಯಾಂಡ್ಗಳ ಬಿಯರ್ಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ಎಲ್ಲ ಬ್ರ್ಯಾಂಡ್ ಬಿಯರ್ಗೆ ಏಕರೂಪದ ಶೇ.195ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ಸರ್ಕಾರ ಮದ್ಯಗಳ ಮೇಲಿನ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯೊಂದಿಗೆ ನೆರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ದೇಶೀಯ ಮದ್ಯಗಳು (ಐಎಂಎಲ್) ಹಾಗೂ ಬಿಯರ್ ಸ್ಲ್ಯಾಬ್ಗಳನ್ನು ಇತ್ತೀಚೆಗೆ ಪರಿಷ್ಕರಿಸಿತ್ತು. ಬಿಯರ್ ಮೇಲಿನ ಎಇಡಿಯನ್ನು ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ನಿಗದಿಪಡಿಸಿತ್ತು. ಕಡಿಮೆ ತೆರಿಗೆ ಶ್ರೇಣಿಯನ್ನು ತೆಗೆದು ಹಾಕುವುದರೊಂದಿಗೆ ಎಲ್ಲಾ ಬ್ರ್ಯಾಂಡ್ ಬಿಯರ್ಗೆ ಒಂದೇ ರೀತಿಯ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಗೊಳಿಸಿತ್ತು.