ಹಿರೇಕೆರೂರ: ವಿಧಾನಸಭಾ ಕ್ಷೇತ್ರದ ಕೋಡ, ಕಚವಿ ಹಾಗೂ ಹೊಸಕಟ್ಟಿ ಗ್ರಾಮಗಳ ಪಶು ಆಸ್ಪತ್ರೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ತಲಾ ಕಟ್ಟಡಕ್ಕೆ 60 ಲಕ್ಷ ರೂ.ಗಳಂತೆ ಒಟ್ಟು 1.80 ಕೋಟಿ ರೂ.ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2025-26ನೇ ಸಾಲಿನ ಆಯವ್ಯಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ ಸಹಯೋಗದಲ್ಲಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಪ್ರಕಾರ 100 ಪಶು ಆಸ್ಪತ್ರೆಗಳಲ್ಲಿ ಹಿರೇಕೆರೂರ ತಾಲೂಕಿನ ಕೋಡ, ಕಚವಿ ಹಾಗೂ ರಟ್ಟಿಹಳ್ಳಿ ತಾಲೂಕಿನ ಹೊಸಕಟ್ಟಿ ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.
2024-25ನೇ ಸಾಲಿನ ಆಸ್ಕಾಡ್ ಯೋಜನೆಯಡಿ ನೂತನ ಪ್ರಯೋಗಾಲಯ ಮಂಜೂರಾಗಿದೆ. ಮಂಜೂರಾದ 10 ಲಕ್ಷ ರೂ.ಗಳಲ್ಲಿ 2 ಲಕ್ಷ ರೂ. ಪರಿಕರ ಹಾಗೂ 8 ಲಕ್ಷ ರೂ.ಗಳನ್ನು ಪ್ರಯೋಗಾಲಯ ಕಟ್ಟಡಕ್ಕೆ ಖರ್ಚು ಮಾಡಲಾಗುವುದು ಎಂದರು.
ಈಗಾಗಲೇ ತಾಲೂಕಿನಾದ್ಯಂತ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಹಾಗೂ ಚರ್ಮಗಂಟು ಲಸಿಕೆ ಹಾಕಲಾಗಿದೆ. ಸದ್ಯ ತಾಲೂಕಿನಲ್ಲಿ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿಲ್ಲ, ಜೂನ್ ಮತ್ತು ಜುಲೈನಲ್ಲಿ ಕುರಿ ಮತ್ತು ಮೇಕೆಗಳಿಗೆ ಕರಳು ಬೇನೆ ಲಸಿಕೆ ಹಾಕಲು ಪಶುಪಾಲನಾ ಇಲಾಖೆ ಸನ್ನದ್ಧವಾಗಿದೆ. ಅವಳಿ ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ, ಹೆಚ್ಚಿನ ಔಷಧಕ್ಕೆ ಬೇಡಿಕೆ ಬಂದರೆ ಸರ್ಕಾರ ಪೂರೈಸಲು ಸಿದ್ಧವಿದೆ ಎಂದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಕಿರಣ್ ಎಲ್., ಇದ್ದರು.