1.37 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

Rs 1.37 lakh savings budget presented
ಮುದ್ದೇಬಿಹಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಜೆಟ್ ಪ್ರತಿ ಬಿಡುಗಡೆಗೊಳಿಸಲಾಯಿತು. ಮಹಿಬೂಬ ಗೊಳಸಂಗಿ, ಪ್ರೀತಿ ದೇಗಿನಾಳ, ಯಲ್ಲಪ್ಪ ನಾಯ್ಕಮಕ್ಕಳ, ಮಲ್ಲನಗೌಡ ಬಿರಾದಾರ ಹಾಗೂ ಸದಸ್ಯರು ಇದ್ದರು.
Published on

ಮುದ್ದೇಬಿಹಾಳ: ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ 1.37 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.

ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, 16.88 ಕೋಟಿ ರೂ. ಆದಾಯ ಮತ್ತು 16,87 ಕೋಟಿ ರೂ. ಖರ್ಚಿನ ಗುರಿ ಹಾಕಿಕೊಂಡಿದ್ದರಿಂದ ಇದು ಉಳಿತಾಯ ಬಜೆಟ್ ಆಗಿದೆ ಎಂದು ವ್ಯಾಖ್ಯಾನಿಸಿದರು. ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ 1.99 ಕೋಟಿ ರೂ. ಇದ್ದು, ಇಲ್ಲಿವರೆಗೆ ಶೇ.106.10 ರಷ್ಟು ಗುರಿ ಸಾಧಿಸಲಾಗಿದೆ. ನೀರಿನ ತೆರಿಗೆ ಬಾಕಿ 1.15 ಕೋಟಿ ರೂ. ಇದ್ದು, ಇಲ್ಲಿತನಕ ಶೇ.31ರಷ್ಟು ಮಾತ್ರ ಗುರಿಸಾಧಿಸಿದ್ದು, ಏಪ್ರಿಲ್‌ನೊಳಗೇ ಉಳಿದ ಶೇ.69 ಗುರಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಭೆಗೆ ತಿಳಿಸಿದರು.

ಸರ್ಕಾರದ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿ ಹೊಂದಿದವರು 3 ತಿಂಗಳ ಗಡುವಿನೊಳಗಾಗಿ ಡಬಲ್ ಟ್ಯಾಕ್ಸ್ ಭರಿಸಿ ಬಿ-ಖಾತಾ ಮಾಡಿಸಿಕೊಂಡು ಗಣಕೀಕೃತ ನಮೂನೆ 3, 3ಎ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಪುರಸಭೆಗೆ 14,682 ಆಸ್ತಿ ಇದ್ದು ಇದರಲ್ಲಿ 3,787 ಆಸ್ತಿಗಳು ಅನಧಿಕೃವಾಗಿದ್ದು, ‘ಬಿ’ ಖಾತಾ ವ್ಯಾಪ್ತಿಗೆ ಬರುತ್ತವೆ ಎಂದು ಮುಖ್ಯಾಧಿಕಾರಿ ತಿಳಿಸಿದಾಗ ‘ಬಿ’ ಖಾತಾದಾರರಿಗೆ ಶೇ.10 ಅಭಿವೃದ್ಧಿ ಶಲ್ಕ ವಿಧಿಸುವಂತೆ ಅಧ್ಯಕ್ಷರು ಸಲಹೆ ನೀಡಿದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಆದೇಶದಂತೆ ನಡೆದುಕೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು. ಗಡುವಿನೊಳಗೆ ‘ಬಿ’ ಖಾತಾ ಮಾಡಿಸಿಕೊಳ್ಳದಿದ್ದರೆ ನಿಯಮ 10ಎ ಅಡಿ ಕಾನೂನು ಕ್ರಮ ಕೈಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕರ ವಿಶೇಷ ಪ್ರಯತ್ನದಿಂದಾಗಿ ಪುರಸಭೆಗೆ 8 ಕೋಟಿ ರೂ. ಅನುದಾನ ದೊರಕಿದ್ದು, ಅಭಿವೃದ್ದಿಗೆ ಬಳಸಿಕೊಳ್ಳಲು ಕಾಮಗಾರಿ ಅಳವಡಿಸಿ ಟೆಂಡರ್ ಕರೆಯಬೇಕಿದೆ ಎಂದು ಮುಖ್ಯಾಧಿಕಾರಿ ತಿಳಿಸಿದಾಗ ಚರ್ಚೆ ನಡೆದು ಎಲ್ಲ ವಾರ್ಡ್‌ಗಳಿಗೆ ತಲಾ 5 ಲಕ್ಷ ರೂ. ಅನುದಾನ ನೀಡುವಂತೆ ಚುನಾಯಿತ ಸದಸ್ಯರು ಬೇಡಿಕೆ ಇಟ್ಟರು. ನಾಮನಿರ್ದೇಶಿತ ಸದಸ್ಯ ಹರೀಶ ಬೇವೂರ ಅವರು ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ಹಂಚಿಕೆ ಮಾಡುವಂತೆ ಕೇಳಿದಾಗ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ಜಲಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ 30 ಕೋಟಿ ರೂ. ವೆಚ್ಚದ 24*7 ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿರುವುದನ್ನು ತಡೆಗಟ್ಟುವಂತೆ ಸದಸ್ಯರಿಂದ ಕೇಳಿಬಂತು. ಗುತ್ತಿಗೆದಾರರು ಪುರಸಭೆ ಅನುಮತಿ ಪಡೆದುಕೊಂಡಿಲ್ಲ. ಹಿಂದೆ ನಡೆದ ಒಳಚರಂಡಿ ಯೋಜನೆಯಂತೆ ಇದೂ ಹಳ್ಳ ಹಿಡಿಯಬಾರದು. ಎಲ್ಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕೆಂದು ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಬಿರಾದಾರ ತಿಳಿಸಿದರು.ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ ಇದ್ದರು.

ಬಜಾರ್‌ನಲ್ಲಿ ಮೆಗಾ ಮಾರ್ಕೆಟ್ ಕಟ್ಟಡ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದ್ದು, ೆ. 27ರಂದು ಸಂಜೆ 5 ಗಂಟೆಗೆ ಶಾಸಕ ಸಿ.ಎಸ್. ನಾಡಗೌಡರು ಭೂಮಿಪೂಜೆ ನೆರವೇರಿಸಲಿದ್ದಾರೆ. ಸರ್ಕಾರಿ ಪ್ರೊಟೊಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿವೆ. -ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ, ಪುರಸಭೆ, ಮುದ್ದೇಬಿಹಾಳ ವೀರಶೈವ ಲಿಂಗಾಯತ ರುದ್ರಭೂಮಿ ಪಕ್ಕದ ಗಾರ್ಡನ್ ಜಾಗ ಅತಿಕ್ರಮಣ ಮಾಡಿಕೊಂಡು ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಇಂಥ ನಿವೇಶನಗಳನ್ನು ‘ಬಿ’ ಖಾತಾ ವ್ಯಾಪ್ತಿಗೆ ತರಬಾರದು. ಮೂಲ ದಾಖಲಾತಿ ಪರಿಶೀಲಿಸಿ ಕಾನೂನು ಕ್ರಮ ಕೈಕೊಳ್ಳಬೇಕು. -ಹರೀಶ ಬೇವೂರ, ನಾಮನಿರ್ದೇಶಿತ ಸದಸ್ಯ, ಪುರಸಭೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net