ಕುಡಿವ ನೀರು ಸರಬರಾಜಿಗೆ 1.16 ಕೋಟಿ ರೂ.

HVR budget
Published on

ಹಾವೇರಿ: ನಗರದ ವಿವಿಧೆಡೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ 2.50 ಕೋಟಿ ರೂ., ನಗರಸಭೆ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು 20ಲಕ್ಷ ರೂ., ಸ್ಮಶಾನ ಅಭಿವೃದ್ಧಿ ಮತ್ತು ವಿದ್ಯುತ್ ಚಿತಾಗಾರಕ್ಕೆ 25 ಲಕ್ಷ ರೂ., ಕೆರೆಗಳ ಅಭಿವೃದ್ಧಿಗೆ 95 ಲಕ್ಷ ರೂ...!

ಹೀಗೆ ವಿವಿಧ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಶುಕ್ರವಾರ 5.61 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

ಇಲ್ಲಿಯ ನಗರಸಭೆ ಸಭಾಂಗಣದಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಪ್ರತಿ ವಾರ್ಡ್‌ನಲ್ಲೂ ರಸ್ತೆ, ಚರಂಡಿ ದುರಸ್ತಿ ಜತೆಗೆ ನಿರ್ಮಾಣಕ್ಕೆ 3.75 ಕೋಟಿ ರೂ., ಕುಡಿಯುವ ನೀರು ಸಮರ್ಪಕ ಸರಬರಾಜಿಗೆ 1.16 ಕೋಟಿ ರೂ. ಕಾಯ್ದಿರಿಸಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಬೀದಿ ದೀಪ ವ್ಯವಸ್ಥೆ ಕಲ್ಪಿಸಲು, ವಾರ್ಷಿಕ ನಿರ್ವಹಣೆ ಹಾಗೂ ಇತರ ವೆಚ್ಚಕ್ಕೆ 1.15 ಕೋಟಿ ರೂ., ಸಾರ್ವಜನಿಕ ಶೌಚಗೃಹ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆಗೆ 25 ಲಕ್ಷ ರೂ., ಘನತ್ಯಾಜ್ಯ ವಸ್ತು ನಿರ್ವಹಣೆಗೆ ಲ್ಯಾಂಡ್‌ಫಿಲ್ ಸೈಟ್ ಅಭಿವೃದ್ಧಿಗೆ 50 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಜತೆಗೆ ನಗರಸಭೆ ಹೈಸ್ಕೂಲ್ ಅಭಿವೃದ್ಧಿಗೆ 5 ಲಕ್ಷರೂ., ಉದ್ಯಾನ ಹಾಗೂ ಕೆರೆಗಳ ಅಭಿವೃದ್ಧಿಗೆ 95 ಲಕ್ಷರೂ., 31 ವಾರ್ಡ್ ವ್ಯಾಪ್ತಿಯಲ್ಲಿ ಶೇ.100ರಷ್ಟು ಘನತ್ಯಾಜ್ಯ ನಿರ್ವಹಣೆ, ಕಾರ್ಮಿಕರ ವೇತನ, ಚಾಲಕರ ವೇತನ, ಇಂಧನ, ಉಪಹಾರ ಭತ್ಯೆ, ವಾಹನಗಳ ದುರಸ್ತಿ ಹೀಗೆ 3.75 ಕೋಟಿ ರೂ., ಚರಂಡಿ ನಿರ್ಮಾಣಕ್ಕೆ 30 ಲಕ್ಷ ರೂ., ಇನ್ನುಳಿದಂತೆ ಸದಸ್ಯರು ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯ ಅನುದಾನ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.

ಆದಾಯದ ಮೂಲ...

ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರ ಶುಲ್ಕಗಳಿಂದ ಒಟ್ಟು 12.36 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದ ಎಸ್‌ಎಫ್‌ಸಿ ಮುಕ್ತ ನಿಧಿ 3.75 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 5.45 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 5.25 ಕೋಟಿ ರೂ., ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ 5.75 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರಿಗೆ 25 ಲಕ್ಷ ರೂ., ಅಮೃತ (2.0) ನಗರ ಯೋಜನೆಗೆ 25 ಲಕ್ಷ ರೂ., ಸ್ವಚ್ಛ ಭಾರತ ಯೋಜನಗೆ 75 ಲಕ್ಷ ರೂ., ಬೀದಿ ವ್ಯಾಪಾರಸ್ಥರಿಗೆ ವೆಂಡಿಂಗ್‌ಜೋನ್ ನಿರ್ಮಿಸಲು ಡೇ-ನಲ್ಮ್ ಯೋಜನೆಗೆ 30 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭಾರ ಆಯುಕ್ತ ಎಚ್.ಬಿ ಚೆನ್ನಪ್ಪ ಹಾಗೂ ಸದಸ್ಯರು, ಅಧಿಕಾರಿಗಳು ಇದ್ದರು.

ಶಾಸಕ ರುದ್ರಪ್ಪ ಆಕೋಶ...

ಇತ್ತೀಚೆಗೆ ನಗರಸಭೆ ಹಿಂಭಾಗದಲ್ಲಿ ಸಭಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ, ನಾವು ನಗರಸಭೆ ಸದಸ್ಯರು ಹೌದೋ.. ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸದಸ್ಯ ಪೀರಸಾಬ್ ಚೋಪದಾರ ಪ್ರಶ್ನಿಸಿದರು.

ಆಗ ಅಧ್ಯಕ್ಷೆ ಶಶಿಕಲಾ ಮಾಳಗಿ, ಎಲ್ಲ ಸದಸ್ಯರಿಗೂ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದರು. ಇದಕ್ಕೆ ಆಕ್ಷೇಪಿಸಿದ ಚೋಪದಾರ್ ನಮಗೆ ಯಾರೂ ಕರೆ ಮಾಡಿಲ್ಲ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಹಣದಲ್ಲಿ ಸಭಾಂಗಣ ನಿರ್ಮಿಸುವುದಾದರೆ ನಮ್ಮದೇನೂ ತಕರಾರು ಇಲ್ಲ ಎಂದರು.

ಇದರಿಂದ ಕೆರಳಿದ ಶಾಸಕ ರುದ್ರಪ್ಪ ಲಮಾಣಿ, ಹೇಯ್... ಏನ್ ಮಾತಾಡ್ತಾ ಇದ್ದೀಯಾ? ನಿಮ್ಮ ಮನೆಗೆ ಬಂದು ಕಾಲ ಬಿದ್ದು ಕರೆದುಕೊಂಡು ಬರಬೇಕಿತ್ತಾ...?, ಇದು ಯಾರ ಅಪ್ಪನ ಆಸ್ತಿ ಅಲ್ಲ, ಯಾರ ಸ್ವಂತ ಹಣದಲ್ಲೂ ಕಟ್ಟಡ ಕಟ್ಟುತ್ತಿಲ್ಲ, ಸರ್ಕಾರದ ಅನುದಾನ. ನಾನೇ ಆವತ್ತು ಕಾರ್ಯಕ್ರಮ ಮಾಡೋಕೆ ಹೇಳಿದ್ದೆ. ಏನ್ ಮಾಡ್ತಿಯಾ ಈಗ... ನನ್ನ ಮೇಲೆ ಕೇಸ್ ಹಾಕ್ತಿಯಾ.. ಹಾಕು ನೋಡೋಣ.. ಹೆಣ್ಣು ಮಗಳು ಅಧ್ಯಕ್ಷರಿದ್ದಾರೆ ಅಂತಾ ಬಾಯಿಗೆ ಬಂದಂಗ ಮಾತಾಡ್ತಿಯಾ...’ ಎಂದು ರುದ್ರಾವತಾರ ತಾಳಿದರು. ಆಗ ಸಭೆ ಅಕ್ಷರಶಃ ಸ್ತಬ್ಧವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net