ರಾಜಧಾನಿ ಅಭಿವೃದ್ಧಿಗೆ 1.04 ಲಕ್ಷ ಕೋಟಿ ಮೊತ್ತದ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್

dcm visit
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಂದಿನ ನಾಲ್ಕೈದು ವರ್ಷಗಳಲ್ಲಿ 1.04 ಲಕ್ಷ ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೋರಮಂಗಲದ ವೀರ ಯೋಧ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ನಡಿಗೆ’ ಅಭಿಯಾನದ ವೇಳೆ ನಾಗರಿಕರೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು.

ಮಹಾನಗರದ ಜನಸಂಖ್ಯೆ 1.40 ಕೋಟಿಗೂ ಹೆಚ್ಚಿದೆ. ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಸಂಚಾರ ಸಮಸ್ಯೆ ನಿವಾರಣೆಗೆ ವಿವಿಧ ಪ್ರಾಜೆಕ್ಟ್‌ಗಳನ್ನು ರೂಪಿಸಲಾಗಿದೆ. ಎಲಿವೆಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಟನಲ್ ರಸ್ತೆ, ಬಫರ್ ರಸ್ತೆ, ಬೀದಿ ದೀಪಗಳಿಗೆ ಎಲ್ಇಡಿ ಬಲ್ಬ್ ಅಳವಡಿಕೆ ಸೇರಿ ಈ ಎಲ್ಲ ಕೆಲಸಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನಗರವನ್ನು ಸಮಸ್ಯೆಮುಕ್ತಗೊಳಿಸಲಾಗುವುದು ಎಂದರು.

ಜನರ ಬಳಿಗೆ ಸರ್ಕಾರ ಹೋಗಬೇಕು ಎಂಬ ಉದ್ದೇಶದಿಂದ 5 ಪಾಲಿಕೆಗಳನ್ನು ಮಾಡಲಾಗಿದೆ. ಸಿಎ ನಿವೇಶನಗಳ ಬಗ್ಗೆಯೂ ಪ್ರತ್ಯೇಕ ನೀತಿ ತರಲಾಗುತ್ತಿದೆ. ಗೊಂದಲ ಉಂಟಾಗುವುದು ಬೇಡವೆಂದು ನಗರ ಯೋಜನೆ ಕೆಲಸವನ್ನು ಬಿಡಿಎಯಿಂದ ಜಿಬಿಎಗೆ ನೀಡಲಾಗಿದೆ. ದೊಡ್ಡ ಯೋಜನೆಗಳನ್ನು ಸರ್ಕಾರ ಮಾಡಿದರೆ, ಚಿಕ್ಕ ಕೆಲಸಗಳನ್ನು ಪಾಲಿಕೆಗಳು ಮಾಡುತ್ತವೆ ಎಂದು ಪ್ರತಿಪಾದಿಸಿದರು.

ಪಾಲಿಕೆಗಳಿಗೆ ಆರ್ಥಿಕ ಉತ್ತೇಜನ:

ಜಿಬಿಎ ಮೂಲಕ ಐದು ಕಾರ್ಪೋರೇಷನ್‌ಗಳ ರಚನೆ ನಂತರ ಪಾಲಿಕೆ ಆಯುಕ್ತರ ವೆಚ್ಚ ಮಿತಿಯನ್ನು 1ರಿಂದ 3 ಕೋಟಿ ರೂ.ಗೆ ಏರಿಸಲಾಗಿದೆ. ಅದೇ ರೀತಿ ಸ್ಥಾಯಿ ಸಮಿತಿಗೆ 3ರಿಂದ 5 ಕೋಟಿ ರೂ.ಗೆ, ಪಾಲಿಕೆ ಮೇಯರ್‌ಗೆ 5ರಿಂದ 10 ಕೋಟಿ ರೂ. ಮೊತ್ತಕ್ಕೆ ಹೆಚ್ಚಿಸಲಾಗಿದೆ. ಆಮೂಲಕ ಪಾಲಿಕೆಗಳಿಗೆ ಆರ್ಥಿಕ ಉತ್ತೇಜನ ನೀಡಲಾಗಿದೆ.

ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ ಎಂದು ಡಿಸಿಎಂ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್, ಬಿಡಿಎ ಆಯುಕ್ತ ಪಿ.ಮಣಿವಣ್ಣನ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ದೂರುಗಳ ಸುರಿಮಳೆ:

ಅಹವಾಲು ಆಲಿಕೆ ವೇಳೆ ಡಿಸಿಎಂಗೆ ನಾಗರಿಕರಿಂದ ಹೆಚ್ಚಿನ ದೂರುಗಳು ಸಲ್ಲಿಕೆಯಾದವು. ಶಾಂತಿನಗರ ಹೌಸಿಂಗ್ ಸೊಸೈಟಿ, ಮಳೆ ನೀರು ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರದೇಶಗಳ ಸಮಸ್ಯೆ, ಕೋರಮಂಗಲ ಮೆಟ್ರೋ ಮಾರ್ಗ, ಏರ್ ಪೋರ್ಟ್‌ಗೆ ನೇರ ಬಸ್ ವ್ಯವಸ್ಥೆ, ಪಾದಚಾರಿ ಮಾರ್ಗ, ಎಸ್‌ಟಿಪಿ ಅಳವಡಿಕೆ, ಒಳಚರಂಡಿ ಮಾರ್ಗ, ಬೆಳ್ಳಂದೂರು ಕೆರೆ ಸಮಸ್ಯೆ, ಸಸಿ ನೆಡುವಿಕೆ ಸೇರಿ 170ಕ್ಕೂ ಅಧಿಕ ಜನರು ಅಹವಾಲು ಸಲ್ಲಿಸಿದರು.

ಈಜಿಪುರ ಮೇಲ್ಸೇತುವೆ ಪರಿಶೀಲನೆ:

ಕೋರಮಂಗಲ ಭಾಗದಲ್ಲಿ ಸಂಚಾರ ಸಿಕ್ಕು ಪರಿಹರಿಸಲು ಈಜಿಪುರ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಐದು ವರ್ಷದಿಂದ ಕುಂಟುತ್ತಾ ಸಾಗಿರುವ ಈ ಕಾಮಗಾರಿಯನ್ನು ಡಿಸಿಎಂ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಪರಿಶೀಲನೆ ನಡೆಸಿದರು. ಕಾಮಗಾರಿಗೆ ಕೆಲ ತೊಡಕುಗಳು ಎದುರಾಗಿದ್ದು, ಅವುಗಳನ್ನು ನಿವಾರಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಡಿಸಿಎಂ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಜನ ಕಲ್ಯಾಣಕ್ಕೆ ವಾರ್ಷಿಕ 1 ಲಕ್ಷ ಕೋಟಿ ವೆಚ್ಚ:

ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕೆಂದು 5 ಗ್ಯಾರಂಟಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜತೆಗೆ ರೈತರಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ಹೀಗೆ ಜನರ ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಡಿಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net