ಆರ್‌ಆರ್‌ಆರ್ ಕೇಂದ್ರ ಆರಂಭ

rrr
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮರು ಬಳಕೆ ಹಾಗೂ ಮರು ಉಪಯೋಗದ ಧ್ಯೇಯ ಹೊಂದಿರುವ ಆರ್‌ಆರ್‌ಆರ್ ಕೇಂದ್ರಗಳನ್ನು ನಗರದಲ್ಲಿ ಪ್ರಾರಂಭಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಹೇಳಿದರು.
ನಗರದ ಬಸ್ ನಿಲ್ದಾಣದ ಸಮೀಪ ನಗರಸಭೆಯಿಂದ ಆಯೋಜಿಸಿದ್ದ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ನನ್ನ ಜೀವನ ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಹಳೆಯ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಎಸೆಯದೆೆ ಕೇಂದ್ರಗಳಿಗೆ ಕೊಡುವ ಮೂಲಕ ಪ್ರೋತ್ಸಾಹದಾಯಕ ಅಥವಾ ಮನೆಯಲ್ಲಿ ಬಳಸಬಹುದಾದ ವಸ್ತುಗಳನ್ನು ಪಡೆದುಕೊಳ್ಳಬಹುದು, ಕಸ ವಿಲೇವಾರಿ ಬಗ್ಗೆ ಜಾಗೃತಿ, ಮರು ಬಳಕೆ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಪೌರಾಯುಕ್ತ ಕೆ.ಜಿ.ಶಿವಶಂಕರ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನನ್ನ ಜೀವನ ನನ್ನ ಸ್ವಚ್ಛ ನಗರ ಕಾರ್ಯಕ್ರಮವನ್ನು ಮೇ.20 ರಿಂದ ಜೂ.5ರವರೆಗೆ ಹಮ್ಮಿಕೊಳ್ಳಲಾಗಿದೆ. ಪುನರ್ ಸಂಸ್ಕರಣೆ, ಮರು ಬಳಕೆಗೆ ಉತ್ತೇಜನ ನೀಡಿ, ತ್ಯಾಜ್ಯ ಕಡಿತಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ನಗರದ ಕೆಎಆರ್‌ಟಿಸಿ ಬಸ್ ನಿಲ್ದಾಣದ ನಗರಸಭೆ ಮಳಿಗೆಗಳ ಹತ್ತಿರ, ರೈಲ್ವೆ ನಿಲ್ದಾಣ ಬಸ್ ನಿಲ್ದಾಣ, ಕಲ್ಲುಪೇಟೆ, ಒಣ ಕಸ ಸಂಗ್ರಹಣಾ ಕೇಂದ್ರ, ನಗರಸಭೆ ಕಚೇರಿ ಹಿಂಭಾಗ, ಒಣಕಸ ಸಂಗ್ರಹ ಕೇಂದ್ರ, ಬಡಾವಣೆ ವಾರ್ಡ್ ನಂ.3, ನಗರಸಭೆ ಮಳಿಗೆ, ಬಸ್ ನಿಲ್ದಾಣದ ಹತ್ತಿರ, ವಾರ್ಡ್ ನಂ.21ರಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಸಾರ್ವಜನಿಕರು ತಮ್ಮ ಮನೆಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕೇಂದ್ರಗಳಿಗೆ ಕೊಡಬಹುದು. ಇದೇ ವೇಳೆ ಹಳೆಯ ಸಾಮಗ್ರಿ ನೀಡಿದ ಸಾರ್ವಜನಿಕರಿಗೆ ಪ್ರೋತ್ಸಾಹದಾಯಕವಾಗಿ ಎರೆಹುಳು ಗೊಬ್ಬರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net