ಬೀದಿದೀಪ ಅಳವಡಿಕೆಯಲ್ಲಿ ಅವ್ಯವಹಾರ ; ಬಹಿರಂಗ ಚರ್ಚೆಗೆ ಪಾಲಿಕೆ ಸದಸ್ಯ ಜೆ.ಕುಮಾರ್ ಆಹ್ವಾನ

Tmk_Palike1 (2) - Copy
Published on

ತುಮಕೂರು: ನಗರದ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ 45 ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಪಾಲಿಕೆ ಸದಸ್ಯ ಜೆ.ಕುಮಾರ್ ಸವಾಲು ಹಾಕಿದ್ದಾರೆ. ಅವ್ಯವ ಹಾರ ನಡೆದಿರುವ ಬಗ್ಗೆ ಕುಮಾರ್ ನಡೆಸಿದ್ದ ಸುದ್ದಿ ಗೋಷ್ಠಿಗೆ ಸ್ಮಾರ್ಟ್ ಸಿಟಿ ಎಂಡಿ ಬಿ.ಟಿ. ರಂಗಸ್ವಾಮಿ ಸ್ಪಷ್ಟನೆ ನೀಡಿ ಆರೋಪವನ್ನು ಅಲ್ಲಗಳೆದ ಹಿನ್ನೆಲೆಯಲ್ಲಿ ಕುಮಾರ್ ಮತ್ತೊಮ್ಮೆ ಪತ್ರಿಕಾ ಹೇಳಿಕೆ ಮೂಲಕ ಭ್ರಷ್ಟಚಾರ ನಡೆದಿದೆ ಎಂದು ವಾದಿಸಿದ್ದಾರೆ.

ಸ್ಮಾರ್ಟ್‌ಸಿಟಿ ಎಂಡಿ ಅವರೇ ತಿಳಿಸಿರುವಂತೆ 54.60 ಕೋಟಿ ರೂ. ಯೋಜನೆಯಾಗಿದ್ದು, 65 ಲಕ್ಷ ರೂಪಾಯಿಯನ್ನು 84 ಕಂತುಗಳಲ್ಲಿ ಪಾಲಿಕೆ ವತಿಯಿಂದಲೇ ಪಾವತಿಸಲಾಗುತ್ತಿದೆ. 84 ಕಂತುಗಳಲ್ಲಿ ಹಣ ಪಾವತಿ ಹಾಗೂ ಜಿಎಸ್‌ಟಿ ಸೇರಿ ಯೋಜನೆಯಡಿ ಪಾಲಿಕೆ 65 ರಿಂದ 70 ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು ಸಾರ್ವಜನಿಕ ಚರ್ಚೆಗೆ ವೇದಿಕೆ ಕಲ್ಪಿಸಿದರೆ ಬಹಿರಂಗವಾಗಿ ದಾಖಲೆಗಳೊಂದಿಗೆ ಹಗರಣದ ಬಗ್ಗೆ ನಿರೂಪಿಸಲಿದ್ದೇನೆ. ಈ ಹಿಂದೆಯೂ ಸ್ಮಾರ್ಟ್‌ಸಿಟಿ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಪಾಲಿಕೆಯೇ ಹಣ ನೀಡಬೇಕಾಗುತ್ತದೆ. ಸ್ಮಾರ್ಟ್‌ಸಿಟಿ ಕೇವಲ ಟೆಂಡರ್ ಆಹ್ವಾನಿಸಿದೆ ಎಂದು ದೂರಿದ್ದಾರೆ.

ಯೋಜನೆಯ ಲೋಪಗಳ ಬಗ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಜತೆಗೂ ಮಾತನಾಡಲಿದ್ದೇನೆ, ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಪಾಲಿಕೆಯ 40 ಸಾವಿರ ಬೀದಿ ದೀಪಗಳನ್ನು ಅಳವಡಿಸಿದರೆ ಪಾಲಿಕೆಯೇ ನಿರ್ವಹಣೆ ವಾಡಲಿದ್ದು, ಇದರಿಂದ ಮುಂದಿನ ಏಳು ವರ್ಷಗಳಲ್ಲಿ ಪಾಲಿಕೆ ನೀಡಬೇಕಾಗಿರುವ 50 ಕೋಟಿ ಸಾರ್ವಜನಿಕರ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಯೋಜನೆ ಸ್ಥಗಿತಗೊಳಿಸಲು ಕ್ರಮ ವಹಿಸದೇ ಹೋದರೆ ದಾಖಲೆಗಳೊಂದಿಗೆ ಪ್ರಧಾನ ಮಂತ್ರಿ ಕಚೇರಿ, ಕೇಂದ್ರ ನಗರಾಭಿವೃದ್ಧಿ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಸಚಿವರಿಗೆ ದೂರು ಸಲ್ಲಿಸುವ ಮೂಲಕ ಯೋಜನೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಕುವಾರ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net