ಕುಸುಮಾ ವಿರುದ್ಧ ಎಫ್​ಐಆರ್​: ಠಾಣೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್​

cogress protest-kusuma
Published on

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಎಚ್​.ಕುಸುಮಾ ವಿರುದ್ಧ ದಾಖಲಾಗಿರುವ ಎಫ್​ಐಆರ್​ ಹಿಂತೆಗೆದುಕೊಳ್ಳಬೇಕೆಂದು ಶುಕ್ರವಾರ ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬೇರೆ ಯಾರೂ ನಿಯಮ ಉಲ್ಲಂಘಿಸಿಲ್ಲವೇ? ಒಬ್ಬ ಅಸಹಾಯಕ ಹೆಣ್ಣು ಮಗಳು ಸಮಾಜಮುಖಿ ಕೆಲಸ ಮಾಡಲು ಬಂದರೆ ಬೇಕಂತಲೇ ಟಾರ್ಗೆಟ್​ ಮಾಡಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್​ಪಡೆ, ಪಶ್ಚಿಮ ವಿಭಾಗದ ಡಿಸಿಪಿ ಜತೆ ವಾಗ್ದಾದ ನಡೆಸಿದರು

ಪೊಲೀಸ್​ ಠಾಣೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​, ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಪುಷ್ಪಾ ಅಮರನಾಥ್​ ನೇತೃತ್ವ ವಹಿಸಿದ್ದರು. ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಸಚಿವ ಉಮಾಶ್ರೀ ಕೂಡ ದನಿಗೂಡಿಸಿದ್ದರು.

ಪೊಲೀಸರನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಘೋಷಣೆ ಕೂಗಿದ ಪ್ರತಿಭಟನಾನಿರತರು, ಫಲಕಗಳನ್ನ ಹಿಡಿದು ಅಸಮಾಧಾನ ಹೊರಹಾಕಿದರು. ಮಾನಸಿಕವಾಗಿ ಹೆಣ್ಣು ಮಗಳನ್ನ ಕುಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಒಳಗಾಗಿ ಎಫ್​ಐಆರ್​ ದಾಖಲಿಸಿದ್ದಾರೆ. ಕೂಡಲೇ ದೂರು ದಾಖಲಿಸಿದ ಅಧಿಕಾರಿಯನ್ನ ಸಸ್ಪೆಂಡ್​ ಮಾಡಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಇಲ್ಲಿ ನ್ಯಾಯ ಸಿಗದಿದ್ದಲ್ಲಿ ಕೋರ್ಟ್​ಗೂ ಹೋಗುತ್ತೇವೆ. ಎಫ್​ಐಆರ್​ ಕೈಬಿಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಠಾಣೆ ಮುಂದೆ ಕುಳಿತರು.

ಈ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಮಹಿಳೆಯರು ರಾಜಕೀಯಕ್ಕೆ ಬರುವುದು ಕಡಿಮೆ. ಅಂತಹದ್ದರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಲ್ಲಿನ ಠಾಣಾಧಿಕಾರಿ ನವೀನ್​ ಆರ್​ಎಸ್​ಎಸ್​ ಮತ್ತು ಬಿಜೆಪಿ ಏಜೆಂಟ್​ ರೀತಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಈ ಠಾಣೆಯಿಂದ ಎತ್ತಂಗಡಿ ಮಾಡಬೇಕು, ಇಲ್ಲವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರು ಮಾತೆತ್ತಿದರೆ ರಾಮನ ಹೆಸರನ್ನು ಹೇಳುತ್ತಾರೆ. ಮಹಿಳೆಯರಿಗೆ ಗೌರವ ಕೊಡುವುದೇ ನಮ್ಮ ಸಂಸ್ಕೃತಿ ಎನ್ನುತ್ತಾರೆ. ಇಡೀ ದೇಶವೇ ಬಿಜೆಪಿ ಸಂಸ್ಕೃತಿಯನ್ನು ನೋಡುತ್ತಿದೆ ಎಂದು ಕಿಡಿಕಾರಿದರು.

ಪುಷ್ಪಾ ಅಮರನಾಥ್​ ಮಾತನಾಡಿ, ರಾಜ್ಯದಲ್ಲಿ ಗೂಂಡಾಗಿರಿ ಸರ್ಕಾರವಿದೆ. ನಮ್ಮ ಅಭ್ಯರ್ಥಿ ವಿರುದ್ಧ ದೂರು ದಾಖಲಿಸಿರುವ ಅಧಿಕಾರಿಯನ್ನು ಮೊದಲು ಅಮಾನತು ಮಾಡಬೇಕು ಎಂದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಸುಮಾ, ಒಬ್ಬ ಅಸಹಾಯಕ ಹೆಣ್ಣು ಮಗಳು ಸಮಾಜಮುಖಿ ಕೆಲಸ ಮಾಡಲು ಬಂದರೆ ಟಾರ್ಗೆಟ್​ ಮಾಡಿ ಎಫ್​ಐಆರ್​ ದಾಖಲಿಸಿದ್ದಾರೆ ಎಂದು ಟೀಕಿಸಿದರು.

ಬಳಿಕ ಕುಸುಮಾ ವಿರುದ್ಧ ದಾಖಲಾಗಿರುವ ದೂರನ್ನು ಕೈಬಿಡುವಂತೆ ಒತ್ತಾಯಿಸಿ ಡಿಸಿಪಿಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net