ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

dk ravi-kusuma-gowramma
Published on

ತುಮಕೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ದಿ. ಐಎಎಸ್​ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾರನ್ನು ಕಾಂಗ್ರೆಸ್​ನಿಂದ ಕಣಕ್ಕಿಳಿಸಲು ಪಕ್ಷದ ಹಿರಿಯ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಗರಂ ಆಗಿರುವ ಡಿ.ಕೆ.ರವಿ ಅವರ ತಾಯಿ ಗೌರಮ್ಮ, ಸೊಸೆ ವಿರುದ್ಧ ಕಿಡಿಕಾರಿದ್ದಾರೆ.

ಸ್ವಗ್ರಾಮ ಕುಣಿಗಲ್​ನ ದೊಡ್ಡಕೊಪ್ಪಲಿನಲ್ಲಿ ಮಾತನಾಡಿರುವ ಡಿ.ಕೆ. ರವಿ ತಾಯಿ ಗೌರಮ್ಮ, 'ನನ್ನ ಮಗನ ಹೇಸರೇಳಿಕೊಂಡು ಯಾಕೆ‌ ಚುನಾವಣೆಗೆ ನಿಂತ್ಕೋಬೇಕು? ಡಿ.ಕೆ. ರವಿ ಹೆಂಡ್ತಿ ಅನ್ನೋ‌ ಯೋಗ್ಯತೆಯನ್ನು 6 ವರ್ಷದಲ್ಲೇ ಕಳೆದುಕೊಂಡ್ಲು. ನನ್ನ ಮಗನನ್ನು ಅವತ್ತು ಮಣ್ಣಲ್ಲಿ‌ ಬಿಸಾಕಿ‌ ಹೋದವಳು ಇವತ್ತಿನವರೆಗೂ ಬಂದಿಲ್ಲ. ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿದುಕೊಂಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ನನ್ನ ಮಗನ‌ ದುಡ್ಡಲ್ಲಿ ಒಂದು ರೂಪಾಯಿ‌ಯನ್ನೂ ನಮ್ಮ ಕಷ್ಟಕ್ಕೆ ಅವಳು ಕೊಡಲಿಲ್ಲ. ಚುನಾವಣೆಯಲ್ಲಿ ಅವರು ಏನಾದ್ರೂ ಮಾಡಿಕೊಳ್ಳಲಿ. ಆದ್ರೆ ನನ್ನ‌ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿಕೊಂಡರೆ ಹುಡುಗರನ್ನು ಕರೆದುಕೊಂಡು ನಾನೇ ಹೋಗಿ ಬೆಂಕಿ‌ ಹಚ್ಚಿಸ್ತೀನಿ ಎಂದು ಗೌರಮ್ಮ ಎಚ್ಚರಿಸಿದರು.

ನನ್ನ ಮಗನನ್ನು ನಾನು ಕಷ್ಟಪಟ್ಟು ಓದ್ಸಿದ್ದೆ. ನನ್ನ‌ ಮಗನ‌ ದುಡ್ಡೆಲ್ಲಾ ನುಂಗಿ ನೀರು ಕುಡಿದ್ಲು ಎಂದು ಆರೋಪಿಸಿದ ಗೌರಮ್ಮ, ನನ್ನ ಕಣ್ಣೆದುರೇ ಅವರ ಅಪ್ಪ-ಅಮ್ಮನೂ ನನ್ನ ಹಾಗೆಯೇ ಆಗ್ತಾರೆ.. ಕಾಯ್ತಾ ಇದ್ದೀನಿ ಎಂದು ಹಿಡಿಶಾಪ ಹಾಕಿದರು.

ಇತ್ತ ಡಿ.ಕೆ.ರವಿ ಮಾವ ಹಾಗೂ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ತನ್ನ ಮಗಳು ಕುಸುಮಾರಿಗೆ ಒಮ್ಮತದ ಅಭ್ಯರ್ಥಿಯನ್ನಾಗಿಸಿ ಟಿಕೆಟ್​ ಕೊಡಿಸುವಲ್ಲಿ ಬಿಜಿಯಾಗಿದ್ದಾರೆ. ಅತ್ತ ಡಿಕೆ ರವಿ ತಾಯಿ ಚುನಾವಣೆಯಲ್ಲಿ ತನ್ನ ಮಗನ ಹೆಸರು ಮತ್ತು ಫೋಟೋ ಬಳಸದಂತೆ ತಾಕೀತು ಮಾಡಿದ್ದಾರೆ. ಕುಸುಮಾರನ್ನು ಕಾಂಗ್ರೆಸ್​ ಅಭ್ಯರ್ಥಿ ಮಾಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಒಲವಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net