ಎದುರಾಳಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಗೆಲುವು ನನ್ನದೇ

Kusuma
Published on

ರಾಜರಾಜೇಶ್ವರಿನಗರ ಉಪ ಚುನಾವಣೆ ಪ್ರಚಾರ ಕೊನೆಯ ಹಂತಕ್ಕೆ ಬಂದು ನಿಂತಿದೆ. ದಂಡೆತ್ತಿ ಬಂದ ಎದುರಾಳಿ ವಿರುದ್ಧ ಜಗಜಟ್ಟಿಯಂತೆ ಎದುರಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

# ಕಳೆದ 15 ದಿನಗಳಿಂದ ಕ್ಷೇತ್ರದ ಸುತ್ತುತ್ತಿದ್ದೀರಿ, ಯಾವ ರೀತಿ ನಿಮ್ಮ ಪರವಾಗಿ ಪರಿವರ್ತನೆ ಮಾಡಿಕೊಂಡಿದ್ದೀರಿ. ಗೆಲ್ಲುವ ವಿಶ್ವಾಸ ಎಷ್ಟರಮಟ್ಟಿಗೆ ಹೆಚ್ಚಿದೆ?

ನಾಮಪತ್ರ ಸಲ್ಲಿಸಿದ ಬಳಿಕ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಜನರ ಪ್ರತಿಕ್ರಿಯೆ ಇಷ್ಟೊಂದು ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಖುಷಿಯಿಂದ, ಪ್ರೀತಿಯಿಂದ, ನಗುಮುಖದಿಂದ ಮಾತನಾಡಿಸುತ್ತಿ ದ್ದಾರೆ. ಜನರ ಸ್ವಾಗತ ನನ್ನ ಆತ್ಮಬಲ ಹೆಚ್ಚಿಸಿದೆ. ಕರೊನಾ ಸಂದರ್ಭದಲ್ಲಿಯೂ ಅನೇಕ ಪ್ರದೇಶಗಳಲ್ಲಿ ಜನರು ಮನೆಯೊಳಗೆ ಕರೆದು ಕೂರಿಸಿ ಮಾತನಾಡಿಸಿ, ಆಶೀರ್ವಾದ ಮಾಡಿದ್ದಾರೆ. ಮಗಳ ಸ್ಥಾನವನ್ನು ತುಂಬುವ ಪ್ರಯತ್ನವಾಗುತ್ತಿದೆ. ಜನರ ಪ್ರೀತಿ ನೋಡಿದರೆ ಖಂಡಿತ ಉತ್ತಮ ಅಂತರದಲ್ಲಿ ಗೆಲ್ಲುವ ಭರವಸೆ ಹುಟ್ಟಿಸಿದೆ.

# ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ ಪ್ರಬಲ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿರುವ ಮುನಿರತ್ನರನ್ನು ಎದುರಿಸಲು ಯಾವ ರೀತಿ ಪ್ರಯತ್ನ ಮಾಡಿದ್ದೀರಿ?

ನನಗೆ ಜನಬಲದ ಮೇಲೆ ಪೂರ್ಣ ನಂಬಿಕೆ ಇದೆ. ನನ್ನಿಂದ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಏನು ಮಾಡಲು ಸಾಧ್ಯವೋ ಅದರ ಭರವಸೆ ಕೊಡುತ್ತಿದ್ದೇನೆ. ಇಲ್ಲಸಲ್ಲದ, ಆಕಾಶವನ್ನು ತಂದುಕೊಡುವ ಭರವಸೆ ಕೊಡುತ್ತಿಲ್ಲ. ನನ್ನ ಎದುರಾಳಿ ಎಷ್ಟು ಪ್ರಭಾವಿ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಜನ ಬಲವೇ ಎಲ್ಲವನ್ನೂ ತೀರ್ಮಾನ ಮಾಡುತ್ತಿದೆ. ಪ್ರಭಾವ ಇಲ್ಲದವರನ್ನೂ ಜನಬಲ ಪ್ರಭಾವಿಗಳನ್ನಾಗಿ ಮಾಡುತ್ತದೆ. ಅದೇ ರೀತಿ ಪ್ರಭಾವಿಯನ್ನು ಪ್ರಭಾವ ಇಲ್ಲದಂತೆ ಮಾಡುವ ಶಕ್ತಿಯೂ ಜನಬಲಕ್ಕಿದೆ. ಆ ನಂಬಿಕೆ ನನಗಿದೆ. ಗೆಲುವು ನನ್ನದೇ ಎಂಬ ವಿಶ್ವಾಸವಿದೆ.

# ಪ್ರಚಾರದಲ್ಲಿ ತಾಯಿ ಕಾರ್ಡ್, ಜಾತಿ ಕಾರ್ಡ್ ಹೆಚ್ಚೆಚ್ಚು ಎನ್ನುವಂತೆ ಪ್ರಯೋಗವಾಗುತ್ತಿದೆ. ನಿಮ್ಮ ಪ್ರಕಾರ ಯಾವ ವಿಷಯದ ಮೇಲೆ ಚುನಾವಣೆ ನಡೆಯಬೇಕಿತ್ತು?

ಯಾವುದೇ ಚುನಾವಣೆ ಜನಗಳ ಸಮಸ್ಯೆ, ಅದನ್ನು ಪರಿಹರಿಸುವ ವಿಚಾರದಲ್ಲಿ ಆಗಬೇಕು. ಜಾತಿ ಆಧಾರದ ಮೇಲೆ, ತಾಯಿ ವಿಷಯ ಅಥವಾ ವೈಯಕ್ತಿಕ ಚುನಾವಣೆ ಆಗಲೇಬಾರದು. ಆದರೆ, ಇಲ್ಲಿ ಆ ರೀತಿ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಿಂದಿಸುತ್ತಿದ್ದಾರೆ.

# ಡಿ.ಕೆ. ರವಿ ಹೆಸರನ್ನು ಚುನಾವಣೆ ವಿಷಯವಾಗಿ ತರುವ ಪ್ರಯತ್ನ ಯಾರ ಕಡೆಯಿಂದ ನಡೆಯಿತು?

ನಾಮಪತ್ರ ಸಲ್ಲಿಕೆಗೂ ಮೊದಲು ರವಿ ಅವರ ಹೆಸರು ಚುನಾವಣೆಯಲ್ಲಿ ಹೇಳಬಾರದು ಎಂದು ಟೀಕೆಗಳು ಬಂದವು. ನನಗೆ ರವಿ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದರು. ನಾನು ಧರ್ಮ ಸಮ್ಮತವಾಗಿ ವಿವಾಹವಾಗಿದ್ದೇನೆ, ನಾನು ರವಿ ಹೆಸರು ಹೇಳದೆ ಯಾರು ಹೇಳುತ್ತಾರೆ?

# ನೀವು ಗೆದ್ದರೆ ನಿಮ್ಮ ಮೊದಲ ಆದ್ಯತೆ ಏನು? ಯಾವ ಕಾರಣಕ್ಕೆ ಮತದಾರರು ನಿಮಗೆ ಮತ ಹಾಕಬೇಕು?

ಪ್ರಚಾರದ ಸಂದರ್ಭದಲ್ಲಿ ಜನರೇ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಬಹಳ ಸಮಸ್ಯೆ ಇದೆ. ಕೆಲವು ಭಾಗಗಳಲ್ಲಿ ಕನಿಷ್ಠ ಮೂಲಸೌಕರ್ಯ ಸಿಗದಿರುವುದು ಕಂಡುಬಂದಿದೆ. ಈ ಸಮಸ್ಯೆಗೆ ಮೊದಲು ಪರಿಹಾರ ಕೊಡಬೇಕು. ಕರೊನಾದಿಂದ ಕೆಲಸ ಕಳೆದುಕೊಂಡು ಹಲವರು ಕಷ್ಟಕ್ಕೆ ಸಿಲುಕಿದ್ದಾರೆ. ನಾನು ಶಾಸಕಿಯಾಗಿ ಇಂಥ ಸಮಸ್ಯೆಗೆ ಸ್ಪಂದಿಸಬೇಕೆಂದಿದ್ದೇನೆ. ಕ್ಷೇತ್ರದ ಬಗ್ಗೆ ನನ್ನದೇ ಆದ ಕನಸಿನ ಯೋಜನೆ ಇದೆ.

# ನಿಮ್ಮ ಗೆಲುವಿನ ಸೂತ್ರವೇನು?

ಚುನಾವಣೆ ಗೆಲ್ಲಲು ಪ್ರಾಮಾಣಿಕ ದಾರಿಯಲ್ಲಿ ಪ್ರಯತ್ನ ಶೀಲರಾಗಿದ್ದೇವೆ. ನುಡಿದಂತೆ ನಡೆಯುತ್ತೇನೆ ಎಂದು ಜನರಿಗೆ ಭರವಸೆ ನೀಡುತ್ತಿದ್ದೇನೆ.

# ಕಾಂಗ್ರೆಸ್​ಗೆ ನೀವು ಹೊಸಬರು. ಪಕ್ಷದ ಮುಖಂಡರು, ಕಾರ್ಯಕರ್ತರು ನಿಮ್ಮನ್ನು ಯಾವ ರೀತಿ ಸ್ವೀಕರಿಸಿದ್ದಾರೆ?

ಪಕ್ಷದ ತೀರ್ವನವನ್ನು ಎಲ್ಲರೂ ಒಪ್ಪಿ ನನ್ನ ಜತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ ಆದಿಯಾಗಿ ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರು ಪ್ರೀತಿಯಿಂದ ಸ್ವಾಗತಿಸಿ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ. ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಹಿಳಾ ಮುಖಂಡರ ಸಹಕಾರವನ್ನೂ ಮರೆಯುವಂತಿಲ್ಲ. ಪುಷ್ಪಾ ಅಮರನಾಥ್, ಉಮಾಶ್ರೀ, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಪದ್ಮಾವತಿ ಹೀಗೆ ಅನೇಕರು ಬೆನ್ನೆಲುಬಾಗಿ ನಿಂತಿದ್ದಾರೆ.

# ಚುನಾವಣೆ ಕಣಕ್ಕಿಳಿದಾಗ, ಓದು, ಅಧ್ಯಯನ, ಶಿಕ್ಷಣ ನಿಮ್ಮ ಅಸ್ತ್ರವಾಗಿತ್ತು. ನಿಮ್ಮ ಎದುರು ತೋಳ್ಬಲ, ಹಣಬಲ ಪ್ರದರ್ಶನ ಆಗುತ್ತಿರುವ ಅನುಭವವಾಗಿರಬೇಕು. ಯಾವ ರೀತಿ ಎದುರಿಸುತ್ತಿದ್ದೀರಿ?.

ನನ್ನ ಕುಟುಂಬಕ್ಕೆ ತೋಳ್ಬಲ, ಹಣಬಲದ ಹಿನ್ನೆಲೆ ಇಲ್ಲ. ಕ್ರಿಮಿನಲ್ ಹಿನ್ನೆಲೆ ನನ್ನ ಕುಟುಂಬಕ್ಕಿಲ್ಲ. ಚುನಾವಣೆ ಕಣದಲ್ಲಿ ತೋಳ್ಬಲ ಕಾಣುತ್ತಿದೆ. ಪ್ರಚಾರಕ್ಕೆ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ. ಇದು ನನಗೆ ಹೊಸತು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸರಿಯಾದ ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ.

ಮುನಿರತ್ನ ತಾಯಿ ಬಗ್ಗೆ ನಾವು ಮಾತಾಡಿಯೇ ಇಲ್ಲ

ನಮ್ಮ ಎದುರಾಳಿ ಅಭ್ಯರ್ಥಿಯು ತಾಯಿ ವಿಚಾರವನ್ನು ಚುನಾವಣೆ ವಿಚಾರವಾಗಿ ಮಾಡಲು ಹೊರಟಿದ್ದಾರೆ. ತಮ್ಮ ತಾಯಿ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆಂದು ಬಿಂಬಿಸುತ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಕುಸುಮಾ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ ಎಂದು ಮುನಿರತ್ನ ಹಿಂದೆ ಹೇಳಿದ್ದರು, ಈಗ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ ಎಂದು ನಮ್ಮ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆಗ ನಾನೂ ಅಲ್ಲೇ ಇದ್ದೆ. ಆದರೆ, ತಾಯಿ ಬಗ್ಗೆ ಮಾತನಾಡಿದರು ಎಂದು ಅಪಪ್ರಚಾರ ನಡೆಯುತ್ತಿದೆ. ಮುನಿರತ್ನ ತಾಯಿ ಬಗ್ಗೆ ಯಾರೂ ಮಾತನಾಡಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net