ಚನ್ನಪಟ್ಟಣ: ಮುಂಬರುವ ಉಪಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ತಿಳಿಸಿದರು.
ನಗರದ ಅನುಗ್ರಹ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಿದ ಆರ್‌ಪಿಐ ಪಕ್ಷಕ್ಕೆ ವಿಶೀಷ್ಟ ಇತಿಹಾಸವಿದೆ. ಚನ್ನಪಟ್ಟಣ ತಾಲೂಕಿನಲ್ಲಿ ದಲಿತ ಸಮುದಾಯದ ಸ್ಥಿತಿ ಬಹಳ ಕೆಟ್ಟದಾಗಿದೆ. ಇದರೊಂದಿಗೆ, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಇದುವರೆಗಿನ ಜನಪ್ರತಿನಿಧಿಗಳು ವಿಫಲಗೊಂಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ದಲಿತರನ್ನು ಇಂದಿಗೂ ಅಸ್ಪೃಶ್ಯರಂತೆ ಕಾಣುತ್ತಿವೆೆ. ಯಾವುದೇ ರಾಜಕೀಯ ಪಕ್ಷಗಳು ದಲಿತರಿಗೆ ಸರಿಯಾದ ಸ್ಥಾನ ಮಾನ ನೀಡಿಲ್ಲದಿರುವುದೇ ಇದಕ್ಕೆ ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ, ಅ.10ರಂದು ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಿ, ಪಕ್ಷದ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದರು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ರಾಜಕೀಯ ಪಕ್ಷಗಳು ದಲಿತರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿವೆ. ದಲಿತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ 25 ಸಾವಿರ ಕೋಟಿ ರೂ. ಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಇಂತಹ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದರು. ಪದಾಧಿಕಾರಿಗಳಾದ ಅಪ್ಪಗೆರೆ ಶ್ರೀನಿವಾಸಮೂರ್ತಿ, ಮರಳವಾಡಿ ಮಂಜು, ತಾಲೂಕು ಅಧ್ಯಕ್ಷ ಚಕ್ಕೆರೆ ಲೋಕೇಶ್ ಇದ್ದರು.