ಬಸ್ ಸೌಕರ್ಯವನ್ನೇ ಕಾಣದ ಹನುಮಯ್ಯನಪಾಳ್ಯ! ; ಸೇತುವೆ ಬಿದ್ದು ಸಂಪರ್ಕ ಕಳೆದುಕೊಂಡ ಗ್ರಾಮ ; ಶಾಲೆ ತೊರೆಯುತ್ತಿರುವ ಮಕ್ಕಳು

11TMK_PVG_Road_Story_Setuve1
Published on

ಪಾವಗಡ : ರಾಜ್ಯದ ಗಡಿನಾಡು ಪಾವಗಡ ತಾಲೂಕು ಅಭಿವೃದ್ಧಿಯಲ್ಲಿ ಶಾಪಗ್ರಸ್ತವಾಗಿದೆ, ತಾಲೂಕು ಕೇಂದ್ರದಿಂದ 18 ಕಿ.ಮೀ. ದೂರದ ಹನುಮಯ್ಯಪಾಳ್ಯದ ಜನರು ಸ್ವಾತಂತ್ರೃ ಬಂದಾಗಿನಿಂದಲೂ ಗ್ರಾಮದಲ್ಲಿ ಬಸ್ ನೋಡಿಲ್ಲ, ಹೀಗಾಗಿ ರಸ್ತೆಗಳು ಡಾಂಬರನ್ನೇ ಕಂಡಿಲ್ಲ.

ಗ್ರಾಮದಿಂದ ಪಂಚಾಯಿತಿ ಕೇಂದ್ರ ಕನ್ನಮೇಡಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯ ಸೇತುವೆ ಮುರಿದುಬಿದ್ದಿದ್ದು, ಶಾಲೆಗೆ ತೆರಳುವ ಮಕ್ಕಳ ಸೈಕಲ್‌ಕೂಡ ಮೂಲೆ ಸೇರಿವೆ. ನಾಲ್ಕು ಕಿ.ಮೀ. ದೂರದಲ್ಲಿರುವ ಶಾಲೆಗೆ ಪ್ರತಿದಿನ ನಡೆದೇ ಸಾಗುವ ಮಕ್ಕಳ ಕಲಿಕೆಗೆ ಸಾರಿಗೆ ಅವ್ಯವಸ್ಥೆ ಕೂಡ ತೊಡಕಾಗಿದೆ.

ಪರಿಶಿಷ್ಟ ಜಾತಿಯ 80 ಬಡ ಕುಟುಂಬದ ಗ್ರಾಮಕ್ಕೆ ರಸ್ತೆ ಇಲ್ಲದೇ ಹೊರ ಜಗತ್ತಿನೊಡನೆ ಸಂಪರ್ಕವೇ ಇಲ್ಲದಂತಾಗಿದೆ. ಇಡೀ ಗ್ರಾಮದಲ್ಲಿ ಸರ್ಕಾರಿ ನೌಕರಿ ಪಡೆದ ಒಬ್ಬರೂ ಇಲ್ಲ, ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯೂ ಕಡಿಮೆ.

ಇತ್ತೀಚೆಗೆ ಕರೊನಾದಿಂದ ಪರೀಕ್ಷೆ ಇಲ್ಲದೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ನಾಲ್ಕೈದು ಮಕ್ಕಳು ಪಾವಗಡಕ್ಕೆ ತೆರಳಲು ಬಸ್ ಸೌಕರ್ಯವಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸಕ್ಕೇ ಗುಡ್‌ಬೈ ಹೇಳಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಭಾಗದ ದೇವಯ್ಯನಪಾಳ್ಯ, ಕುರುಬರಪಾಳ್ಯ, ಕನ್ನಮೇಡಿ, ಚಿತ್ತಗಾನಹಳ್ಳಿ, ಕೃಷ್ಣಗಿರಿ ಹಾಗೂ ವೀರ್ಲಗುಂದಿ ಗ್ರಾಮದ ಜನರು ಪಾವಗಡಕ್ಕೆ ತೆರಳಲು ಅನುಕೂಲವಾಗುವ ರಸ್ತೆಯೇ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈಗಿರುವ ರಸ್ತೆಯು ಡಾಂಬರ್ ಕಂಡು ದಶಕಗಳೇ ಕಳೆದಿದ್ದು ಅಪರೂಪಕ್ಕೆ ಓಡಾಡುವ ಪ್ಯಾಸೆಂಜರ್ ಆಟೋಗಳೂ ಕೂಡ ರಿಪೇರಿಗೆ ಕಾಸು ಹೊಂದಿಸಲಾಗದೆ ಮೂಲೆ ಸೇರಿವೆ. ದ್ವಿಚಕ್ರವಾಹನ, ಕಾರುಗಳಿದ್ದರಷ್ಟೇ ಇಲ್ಲಿಂದ ಪಟ್ಟಣಕ್ಕೆ ಸಂಪರ್ಕ, ಇಲ್ಲದಿದ್ದರೆ ಇಲ್ಲ ಎಂಬ ದುಸ್ಥಿತಿ ಇದೆ.

ಬೂತಪ್ಪನಂತೆ ಕೂತಿದೆ ಶುದ್ಧ ನೀರಿನ ಘಟಕ! : ಪಾವಗಡ ತಾಲೂಕಿನ ಅಂತರ್ಜಲದಲ್ಲಿ ಪ್ಲೊರೈಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಸಾಕಷ್ಟು ಸಂಶೋಧನೆಗಳಿಂದಲೇ ದೃಢವಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲಿ ಹನುಮಯ್ಯನ ಪಾಳ್ಯದಲ್ಲಿ ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕ ಬೂತಪ್ಪನಂತೆ ಸುಮ್ಮನೆ ಕೂತಿದೆ. ಆರಂಭವಾದ ಕೆಲವೇ ದಿನವಷ್ಟೇ ಶುದ್ಧ ನೀರು ಬಂದಿದ್ದುಬಿಟ್ಟರೇ ಕೆಟ್ಟು ಮೂಲೆ ಸೇರಿದ ಮೇಲೆ ಅದನ್ನು ಸರಿಪಡಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಿಲ್ಲ.

ತಾಲೂಕಿನಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ, ಅನುದಾನದ ಕೊರತೆಯಿಂದ ಎಲ್ಲಿಯೂ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ, ಹಣ ಬಂದಾಗ ಆದ್ಯತೆಯ ಮೇಲೆ ರಸ್ತೆ ರಿಪೇರಿ ಮಾಡಲಾಗುವುದು. ಸುರೇಶ್ ಎಇಇ, ಪಿಆರ್‌ಇಡಿ ಗ್ರಾಮದಲ್ಲಿ ನಮಗೆ ಕನಿಷ್ಠ ಮೂಲಸೌಕರ್ಯವಿಲ್ಲ, ನಮ್ಮೂರಿಗೆ ಸಾರ್ವಜನಿಕ ಸಾರಿಗೆ ಎಂದಿಗೂ ಬಂದಿಲ್ಲ. ಪಟ್ಟಣಕ್ಕೆ ಹೋಗಲಾರದೆ ಎಷ್ಟೊ ಜನ ವಿದ್ಯಾಭ್ಯಾಸ ಬಿಟ್ಟಿದ್ದೂ ಇದೆ. ಇರುವ ಬಂಡಿಜಾಡಿನಲ್ಲಿ ಸೇತುವೆ ಮುರಿದುಬಿದ್ದು ಸಣ್ಣ, ಪುಟ್ಟ ವಾಹನಗಳು ಸಂಚರಿಸದಂತಾಗಿದೆ. ವಿವೇಕ್ ಹನುಮಯ್ಯನಪಾಳ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net