ಯುವಕರು ರಾಷ್ಟ್ರ ಮುನ್ನಡೆಸುವ ಹೊಣೆಗಾರಿಕೆ ಹೊತ್ತುಕೊಳ್ಳಲಿ, ಸೇವಾಗುಣ ಬೆಳೆಸಿಕೊಳ್ಳಲು ಸಚಿವೆ ರಕ್ಷಾ ಕಾಡ್ಸೆ ಸಲಹೆ,  ಹುಬ್ಬಳ್ಳಿಯಲ್ಲಿ 75 ಉದ್ಯೋಗ ಪತ್ರ ವಿತರಣೆ

IMG_20250426_182533_60-1.jpg
Published on

ಹುಬ್ಬಳ್ಳಿ: ಆತ್ಮನಿರ್ಭರ ಭಾರತ ಕಾರ್ಯಕ್ರಮ ಜಾರಿಯಾದ ನಂತರ ದೇಶದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇವುಗಳ ಪ್ರಯೋಜನ ಪಡೆದುಕೊಂಡು ಯುವಕರು ರಾಷ್ಟ್ರ ಮುನ್ನಡೆಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕೆಂದು ಕೇಂದ್ರ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ರಾಜ್ಯ ಸಚಿವೆ ರಕ್ಷಾ ಕಾಡ್ಸೆ ಹೇಳಿದರು.

ಇಲ್ಲಿಯ ಬಿವಿಬಿ ಆವರಣದ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆದಾಯ ತೆರಿಗೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರೋಜಗಾರ್ ಮೇಳದಲ್ಲಿ 48ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ದೇಶದಲ್ಲಿ ನಡೆಯುತ್ತಿರುವ 15ನೇ ರೋಜಗಾರ್ ಮೇಳ ಇದಾಗಿದೆ. ದೇಶಾದ್ಯಂತ 51ಸಾವಿರಕ್ಕೂ ಹೆಚ್ಚು ಜನರಿಗೆ ವಿವಿಧ ಇಲಾಖೆಯಡಿ ಕೆಲಸ ನೀಡಲಾಗಿದೆ. ಇದು ಯುವಕರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿದೆ. ಅರ್ಹತೆಗೆ ಅನುಗುಣವಾಗಿ ಉದ್ಯೋಗ ಲಭ್ಯವಾಗುತ್ತಿರುವುದೇ ಇದಕ್ಕೆ ಕಾರಣ ಎಂದರು.

ಯುವಶಕ್ತಿಗೆ ಬಲ ತುಂಬಲು ಕೇಂದ್ರ ಸರ್ಕಾರ ಬಹಳಷ್ಟು ಪರಿಶ್ರಮ ಪಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಮುನ್ನಡೆ ಸಾಧಿಸುತ್ತಿದೆ. ಸರ್ಕಾರಿ ಕೆಲಸದ ವ್ಯಾಖ್ಯಾನ ಇದೀಗ ಬದಲಾಗಿದ್ದು, ಪರಿಣಾಮ ಆಧಾರಿತವಾಗಿರಬೇಕೆಂದು ಸರ್ಕಾರವು ಬಯಸುತ್ತದೆ. ಹಾಗಾಗಿ ಯುವಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಅದನ್ನು ವಿಶ್ವಾಸದಿಂದ ನಿಭಾಯಿಸಬೇಕು. ದೇಶದ ಪ್ರಗತಿಯಾಗಬೇಕಾದರೆ, ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ದೇಶದಲ್ಲಿ ನಡೆಯುತ್ತಿರುವ 15ನೇ ರೋಜಗಾರ ಮೇಳ ಹಾಗೂ ಆದಾಯ ತೆರಿಗೆ ಇಲಾಖೆಯಡಿ ನಾಲ್ಕನೇ ಮೇಳವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 75 ಜನರಿಗೆ ಉದ್ಯೋಗ ಪತ್ರ ವಿತರಣೆಯಾದವು. ಈ ಪೈಕಿ 48 ಜನರು ಕಾರ್ಯಕ್ರಮಕ್ಕೆ ಹಾಜರಾಗಿ ಅತಿಥಿಗಳಿಂದ ಪತ್ರ ಪಡೆದುಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಶಿಶಿರ ಧಮಜಿ, ಜಂಟಿ ಆಯುಕ್ತೆ ದೀಪಾಲಿ, ರಾಜೇಶ ಪಾಳೇಕರ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾಕ್ಷಿ ಚೌದರಿ, ಮನಿಷಾ ಕುಮಾರಿ, ಪ್ರಪುಲ್ ಸಿದ್ರಾಮಪ್ಪ, ಸೌರಭ, ಶಿವಕುಮಾರ, ಯಶೋಧಾ ಮೇದಾರ, ಅರ್ಪಿತಾ ರಾಜ, ಪವನ, ಗಣೇಶ, ಮೌನೇಶ್ವರ, ಮಿತಿಲೇಶ, ಸದ್ದಾಮ ಅನ್ಸಾರಿ, ಮೋಕ್ಸಾ, ವಿಜಯಕುಮಾರ, ವಿಜಯಲಕ್ಷ್ಮಿ ಸೇರಿ 48 ಜನರಿಗೆ ಉದ್ಯೋಗ ಪತ್ರ ನೀಡಲಾಯಿತು.

ಆದಾಯ ತೆರಿಗೆ ಅಧಿಕಾರಿಗಳಾದ ಶಾಂತಲಾ ಜಿ.ವಿ. ಹಾಗೂ ಶಂಕರ ಗಾಯಕವಾಡ ಕಾರ್ಯಕ್ರಮ ನಿರೂಪಿಸಿದರು. ರೋಜಗಾರ್ ಮೇಳದ ನೋಡಲ್ ಆಫೀಸರ್, ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರವೀಂದ್ರ ಹತ್ತಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net