ರಾಯಲ್ ಸ್ಟ್ರೈಕರ್ಸ್‌ ಮಕ್ಕಂದೂರು ಚಾಂಪಿಯನ್

20adarshkdga2
Published on

ಮಡಿಕೇರಿ: ಹಿಂದು ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಹಿಂದು ಕ್ರಿಕೆಟ್ ಕಪ್-2020’ ಪಂದ್ಯಾವಳಿಯಲ್ಲಿ ‘ರಾಯಲ್ ಸ್ಟ್ರೈಕರ್ಸ್‌ ಮಕ್ಕಂದೂರು’ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ರಾಯಲ್ ಸ್ಟ್ರೈಕರ್ಸ್‌ ಮಕ್ಕಂದೂರು ಮತ್ತು ಹಿಂದು ಫ್ರೆಂಡ್ಸ್ ಮೂರ್ನಾಡು ತಂಡಗಳು ಫೈನಲ್ ಪ್ರವೇಶ ಪಡೆದಿದ್ದವು. ಮಂದ ಬೆಳಕಿನ ಕಾರಣ ಫೈನಲ್ ಪಂದ್ಯಾಟ ಸೂಪರ್ ಓವರ್ ಮೊರೆ ಹೋಗಲಾಯಿತು. ಟಾಸ್ ಗೆದ್ದ ರಾಯಲ್ ಸ್ಟ್ರೈಕರ್ಸ್‌ ತಂಡ ಒಂದು ಓವರ್‌ನಲ್ಲಿ 2ವಿಕೆಟ್ ಕಳೆದುಕೊಂಡು 9ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಹಿಂದು ಫ್ರೆಂಡ್ಸ್ ಮೂರ್ನಾಡು ತಂಡ 2 ವಿಕೆಟ್‌ಗೆ 5ರನ್ ಗಳಿಸಲಷ್ಟೇ ಶಕ್ತವಾಗಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನಕ್ಕೆ ನಡೆದ ನಾಣ್ಯ ಚಿಮ್ಮುವಿಕೆಯಲ್ಲಿ ಹಿಂದು ಕ್ರಿಕೆಟ್ ಕ್ಲಬ್ ಮ್ಯಾಕ್ಸ್ವೆಲ್ ತಂಡ ಜಯಶಾಲಿಯಾಯಿತು.
ಸೆಮಿಫೈನಲ್: ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ಹಿಂದು ಫ್ರೆಂಡ್ಸ್ ಮೂರ್ನಾಡು ತಂಡ ನಿಗದಿತ 4 ಓವರ್‌ನಲ್ಲಿ 2ವಿಕೆಟ್‌ಗೆ 69 ರನ್ ಕಲೆ ಹಾಕಿತು. ತಂಡದ ಪರ ಸಂದೇಶ್ ರೈ ಕೊನೆ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ವೈಯಕ್ತಿಕ 45 ರನ್ ಬಾರಿಸಿ ತಂಡ ಮೊತ್ತ ಏರಿಸುವಲ್ಲಿ ಸಫಲರಾದರು. ಬೃಹತ್ ರನ್ ಗುರಿ ಬೆನ್ನಟ್ಟಿದ ಹಿಂದು ಕ್ರಿಕೆಟ್ ಕ್ಲಬ್ ಮ್ಯಾಕ್ಸ್ವೆಲ್ ತಂಡ 7ವಿಕೆಟ್ ಕಳೆದುಕೊಂಡು 60 ರನ್ ದಾಖಲಿಸಿ ಸೋಲು ಕಂಡಿತು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಸ್ಟ್ರೈಕರ್ಸ್‌ ಮಕ್ಕಂದೂರು ತಂಡ ನಿಗದಿತ 4 ಓವರ್‌ನಲ್ಲಿ 51 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಹಿಂದು ಕ್ರಿಕೆಟ್ ಕ್ಲಬ್ ಮಡಿಕೇರಿ ತಂಡ 45 ರನ್ ಗಳಿಸಿ ಸೋಲುಕಂಡಿತು.

ಬ್ಯಾಟ್ ಬೀಸುವ ಮೂಲಕ ಚಾಲನೆ: ಹಿಂದು ಕ್ರಿಕೆಟ್ ಪಂದ್ಯಾವಳಿಗೆ ವಕೀಲರಾದ ಮೋಹನ್ ಕುಮಾರ್ ಬ್ಯಾಟಿಂಗ್ ಹಾಗೂ ವಿಶ್ವ ಹಿಂದು ಪರಿಷತ್‌ನ ಪ್ರಮುಖರಾದ ಸುರೇಶ್ ಬೌಲಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಭಾನುವಾರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಬಜರಂಗದಳದ ಸಂಚಾಲಕ ಚೇತನ್, ರಾಜ್ಯ ಸಂಚಾಲಕ ರಘು ಸಕಲೇಶ್‌ಪುರ, ವಿಶ್ವ ಹಿಂದು ಪರಿಷತ್‌ನ ಸಂಚಾಲಕ ಪುದಿಯೊಕ್ಕಡ ರಮೇಶ್, ಕ್ಲಬ್‌ನ ಅಧ್ಯಕ್ಷ ಪವನ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಶಸ್ತಿ ಪ್ರಧಾನ: ಪ್ರಥಮ ಬಹುಮಾನವಾಗಿ 33333 ರೂ.ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 22222 ರೂ.ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಉತ್ತಮ ದಾಂಡಿಗ-ಮ್ಯಾಕ್ಸ್ವೆಲ್ ತಂಡದ ರಾಮಣ್ಣ, ಪಂದ್ಯ ಶ್ರೇಷ್ಠ-ಹಿಂದು ಫ್ರೆಂಡ್ಸ್ ಮೂರ್ನಾಡು ತಂಡದ ಸಂದೇಶ್ ರೈ, ಬೆಸ್ಟ್ ಕ್ಯಾಚರ್(ಜಂಟಿ ಪ್ರಶಸ್ತಿ) ಸಂದೇಶ್‌ರೈ ಮತ್ತು ಅರುಣ್, ಉತ್ತಮ ಎಸೆತಗಾರ-ರಾಯಲ್ ಸ್ಟ್ರೈಕರ್ಸ್‌ ಮಕ್ಕಂದೂರು ತಂಡದ ಜೀವನ್ ಪಡೆದುಕೊಂಡರು. .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net