

ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಮಂಗಳವಾರ ನಗರದ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೆ ಅಲ್ಲದೇ ಹೆಬ್ಬಾಳು ಪೊಲೀಸ್ ಠಾಣೆ ಬಳಿ ರೌಡಿ ಶೀಟರ್‌ಗಳ ಪರೇಡ್ ನಡೆಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ರೌಡಿ ಶೀಟರ್‌ಗಳ ಪರೇಡ್ ನಡೆಸಿದರು. ಮಂಗಳವಾರ ಬೆಳ್ಳಂಬೆಳಗ್ಗೆ ಮೈಸೂರಿನ 76ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಹೆಬ್ಬಾಳು ಪೊಲೀಸ್ ಠಾಣೆಗೆ ಕರೆಸಿ ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪೆರೇಡ್‌ನಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ಗಳಿಗೆ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು. ಯಾರೂ ಬಾಲ ಬಿಚ್ಚಬಾರದು. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುತ್ತೇನೆ ಎಂದು ಎಚ್ಚರಿಸಿದರು.
ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ವಿವಿಧ ವಿಭಾಗಗಳ ಎಸಿಪಿಗಳು ಹಾಗೂ ಮೈಸೂರು ನಗರ ಎಲ್ಲ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳು ಹಾಜರಿದ್ದರು.