

ಹುಬ್ಬಳ್ಳಿ: ಇಲ್ಲಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಒಬ್ಬನನ್ನು 6 ತಿಂಗಳವರೆಗೆ ಗಡಿಪಾರು ಮಾಡಿ ಫೆ. 21ರಂದು ಆದೇಶ ಹೊರಡಿಸಲಾಗಿದೆ.
ಮಂಟೂರ್ ರೋಡ್ ಮಿಲ್ಲತ್ ನಗರ ನಿವಾಸಿ, ರೌಡಿಶೀಟರ್ ಫಜಲ್‌ಅಹ್ಮದ ತಾಜುದ್ದೀನ ಪುಣೆವಾಲೆ (25) ಎಂಬಾತನನ್ನು ಬೀದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಇಲೆಕ್ಟ್ರೇಷನ್ ಉದ್ಯೋಗಿಯಾಗಿರುವ ಈತ ಬಡವರ ಮೇಲೆ ಹಲ್ಲೆ, ಗುಂಪು ನಿರ್ಮಾಣ, ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಕೊಲೆ ಯತ್ನ ಸೇರಿ ಇತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ.
ಈಗಾಗಲೇ ಈತನ ಮೇಲೆ ಬೆಂಡಿಗೇರಿ, ವಿದ್ಯಾನಗರ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿತು. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಕೊಲೆ ಯತ್ನ, ದೊಂಬಿ, ಹೊಡೆದಾಟ, ಮಾರಕಾಸ್ತ್ರ ಇಟ್ಟುಕೊಂಡು ಬೆದರಿಸುವಂತಹ ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿದ್ದ. ಹಾಗಾಗಿ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.