

ಬೆಂಗಳೂರು: ಪತ್ನಿಯ ಜತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್ ಬಬ್ಲಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಕೋರಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಬ್ಲಿ ಮರ್ಡರ್ ಕೇಸ್ನಲ್ಲಿ ನಾಗನ ಕೈವಾಡವಿರುವ ಶಂಕೆ ಇದ್ದು, ಜೈಲಿನಲ್ಲಿದ್ದುಕೊಂಡೇ ಕೊಲೆ ಮಾಡಿಸಿರುವ ಅನುಮಾನ ಪೊಲೀಸರಲ್ಲಿ ಮೂಡಿತ್ತು. ಸದ್ಯ ಕಲಬುರಗಿ ಜೈಲಿನಿಂದ ನಾಗನನ್ನು ಬಾಡಿ ವಾರೆಂಟ್ ಮೇರೆಗೆ ಕರೆತಂದ ಪೊಲೀಸರು ಬಬ್ಲಿ ಮರ್ಡರ್ ಕೇಸ್ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:
ಕೋರಮಂಗಲ 8ನೇ ಹಂತದಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಲಾಗಿತ್ತು. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‌ಗಳಲ್ಲಿ ಬಂದಿದ್ದ 8 ಮಂದಿ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದರು.
ಬೈಕ್ನಲ್ಲಿ ಪತ್ನಿಯ ಜತೆ ಬಬ್ಲಿ ತೆರಳುತ್ತಿದ್ದ. ಈ ವೇಳೆ ಗ್ಯಾಂಗ್ ಆತನ ಮೇಲೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಬ್ಯಾಂಕ್ ಒಳಗೆ ಆತ ನುಗ್ಗಿದ್ದಾನೆ. ಅಲ್ಲಿಯೂ ಬಿಡದ ಗ್ಯಾಂಗ್ ಬ್ಯಾಂಕ್ ಒಳಗೇ ನುಗ್ಗಿ ಕೊಲೆ ಮಾಡಿದ್ದಾರೆ. ಆಡುಗೋಡಿ ಠಾಣೆಯ ರೌಡಿಶೀಟರ್ನಲ್ಲಿ ಬಬ್ಲಿಯ ಹೆಸರು ಇತ್ತು. ಸ್ಥಳೀಯ ರಾಜೇಂದ್ರ ಕೊಳಚೆ ಪ್ರದೇಶದ ನಿವಾಸಿಯಾಗಿರುವ ಬಬ್ಲಿ ಅಕ್ರಮವಾಗಿ ಮತಾಂತರದಲ್ಲಿ ತೊಡಗಿದ್ದ ಎನ್ನಲಾಗಿತ್ತು.