

ದೊಡ್ಡಬಳ್ಳಾಪುರ: ತಿನ್ನಲು ಏನನ್ನೂ ಕೊಡಲಿಲ್ಲ ಎಂಬ ಸಿಟ್ಟಿನಿಂದ ರೌಡಿಯೊಬ್ಬ ಹೋಟೆಲ್ ಮಾಲೀಕರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಹೋಟೆಲ್ ನಡೆಸುತ್ತಿದ್ದ ಚಂದ್ರಶೇಖರ್ (31) ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ ರಾತ್ರಿ ಹತ್ತು ಗಂಟೆ ಸುಮಾರಿಗೆ ಹೋಟೆಲ್ ಬಳಿಗೆ ಬಂದಿದ್ದ ರೌಡಿಯೊಬ್ಬ, ಆಹಾರವನ್ನು ಕೇಳಿದ್ದಾನೆ. ಅಷ್ಟರಲ್ಲಾಗೇ ಚಂದ್ರಶೇಖರ್ ಹೋಟೆಲ್ ಬಾಗಿಲು ಬಹುತೇಕ ಹಾಕಿ ಆಗಿತ್ತು. ತಿನ್ನಲಿಕ್ಕೆ ಏನೂ ಇಲ್ಲ, ಬಂದ್ ಮಾಡುತ್ತಿದ್ದೇವೆ ಎಂದರೂ ಕೇಳದ ರೌಡಿ, ಏನನ್ನಾದರೂ ನೀಡುವಂತೆ ಒತ್ತಾಯಿಸಿದ್ದಾನೆ.
ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸಿಗರೇಟ್ ಸೇದುತ್ತ ಬಂದಿದ್ದ ಈ ರೌಡಿಯನ್ನು ಯಲ್ಲಪ್ಪ ಎಂದು ಚಂದ್ರಶೇಖರ್ ಗುರುತಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಈತ ಜೈಲಿನಿಂದ ಹೊರಗೆ ಬಂದಿದ್ದು, ರೌಡಿಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ. ಆದರೆ ಜೈಲಿನಿಂದ ಹೊರಬಂದ ಬಳಿಕವೂ ಈತ ತನ್ನ ದಾದಾಗಿರಿ ಮುಂದುವರಿಸಿದ್ದು, ಇದೀಗ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.