ರೌಡಿಶೀಟರ್ ಸ್ಲಂ ಭರತ ಎನ್​ಕೌಂಟರ್: ಸೋಲದೇವನಹಳ್ಳಿಯಲ್ಲಿ ಗುಂಡಿಕ್ಕಿದ ಖಾಕಿ

rowdy sheeter
Published on

ಬೆಂಗಳೂರು: ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಭರತ್ ಅಲಿಯಾಸ್ ಸ್ಲಂ ಭರತ (32) ಪೊಲೀಸರಿಂದ ಎನ್​ಕೌಂಟರ್ ಆಗಿದ್ದಾನೆ.

ಭರತ ಮತ್ತು ಸಹಚರರ ದಾಳಿಯಿಂದ ಗಾಯಗೊಂಡಿರುವ ಸೋಲದೇವನಹಳ್ಳಿ ಇನ್​ಸ್ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ಪೇದೆ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಎನ್​ಕೌಂಟರ್ ನಡೆದಿದ್ದು ಹೇಗೆ?: ಭರತ ಜ.28ರಂದು ಸಹಚರರ ಜತೆ ಬನಶಂಕರಿಯ ಆರ್.ಕೆ. ಲೇಔಟ್​ನಲ್ಲಿ ಪ್ರೇಯಸಿ ಜನ್ಮದಿನದ ಪಾರ್ಟಿ ಮಾಡುತ್ತಿದ್ದ. ಅಲ್ಲಿ ಆತನನ್ನು ಬಂಧಿಸಲು ಮುಂದಾದ ರಾಜಗೋಪಾಲ ನಗರ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಪ್ರೇಯಸಿ ಜತೆ ಮೊರಾದಾಬಾದ್​ಗೆ ಪರಾರಿಯಾಗಿದ್ದ. ತನಿಖೆ ಮುಂದುವ ರಿಸಿದ್ದ ಪೊಲೀಸರು ಫೆ.23ರಂದು ಮೊರಾದಾಬಾದ್​ನಲ್ಲಿ ಬಂಧಿಸಿದ್ದರು. ಅಲ್ಲಿಂದ ಬುಧವಾರ (ಫೆ.26) ತಡರಾತ್ರಿ 2 ಗಂಟೆಗೆ ಬೆಂಗಳೂರಿಗೆ ಕರೆತರುತ್ತಿದ್ದರು. ಈ ವಿಚಾರ ತಿಳಿದಿದ್ದ ಆತನ ಸಹಚರರು ತಡರಾತ್ರಿ 2 ಕಾರುಗಳಲ್ಲಿ ಭರತ್ ಇದ್ದ ಪೊಲೀಸರ ಕಾರನ್ನು ಹಿಂಬಾಲಿಸಿದ್ದಾರೆ. ಪೀಣ್ಯ ಬಳಿ ಕಾರಿನಿಂದ ಡಿಕ್ಕಿ ಹೊಡೆದು ಅಡ್ಡಗಟ್ಟಿದ್ದಾರೆ. ಎಸ್​ಐ ವೆಂಕಟರಮಣಪ್ಪ ಹಾಗೂ ಪೇದೆ ಸುಭಾಷ್​ಗೆ ಲಾಂಗ್ ಮತ್ತು ಪಿಸ್ತೂಲ್​ನಿಂದ ಬೆದರಿಸಿದ್ದಾರೆ. ಇದೇ ವೇಳೆ ಪೊಲೀಸರ ವಶದಲ್ಲಿ ಭರತ ಬೈಕ್​ನಲ್ಲಿ ಪರಾರಿಯಾಗಿದ್ದ.

ರಾತ್ರಿ ಇಡೀ ಕಾರ್ಯಾಚರಣೆ: ಪೊಲೀಸರ ವಶದಿಂದ ಭರತ ಪರಾರಿಯಾಗಿರುವ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನಿಸಲಾಗಿತ್ತು. ಆರೋಪಿಗಳ ಬಳಿ ಪಿಸ್ತೂಲ್ ಮತ್ತು ಮಾರಕಾಸ್ತ್ರ ಇರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ನಾಕಾಬಂದಿ ಹಾಕಿ ಕಾರ್ಯಾಚರಣೆ ಕೈಗೊಂಡಿದ್ದರು. ಸೋಲದೇವನಹಳ್ಳಿಯ ಐಐಎಚ್​ಆರ್ ಆರೋಪಿಗಳಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಸೋಲದೇವನಹಳ್ಳಿ ಇನ್​ಸ್ಪೆಕ್ಟರ್ ದಿನೇಶ್ ಪಾಟೀಲ್ ಮತ್ತು ನಂದಿನಿ ಲೇಔಟ್ ಇನ್​ಸ್ಪೆಕ್ಟರ್ ಲೋಹಿತ್ ತಂಡ ಅಲ್ಲಿಗೆ ತೆರಳಿತ್ತು. ಈ ವೇಳೆ ಭರತ್ ತನ್ನ ಬಳಿಯಿದ್ದ ಪಿಸ್ತೂಲ್​ನಿಂದ ದಿನೇಶ್ ಪಾಟೀಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ, ನಂದಿನಿ ಲೇಔಟ್ ಇನ್​ಸ್ಪೆಕ್ಟರ್ ಲೋಹಿತ್ 2 ಗುಂಡು ಹಾರಿಸಿದ್ದು, ಭರತನ ಎದೆ ಹಾಗೂ ಕೈಗೆ ತಗುಲಿದೆ. ಪೊಲೀಸರು ಬುಲೆಟ್​ಪ್ರೂಫ್ ಜಾಕೆಟ್ ಧರಿಸಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

150 ಮಂದಿ ಗ್ಯಾಂಗ್!: ರಾಮನಗರ ಮೂಲದ ಭರತ್ 150 ಮಂದಿಯ ಗ್ಯಾಂಗ್ ಕಟ್ಟಿಕೊಂಡಿದ್ದ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. 4 ಕೊಲೆ, 10ಕ್ಕೂ ಹೆಚ್ಚು ಕೊಲೆಯತ್ನ, ಬೆದರಿಕೆ, ಡಕಾಯಿತಿ, ಭೂ ಅತಿಕ್ರಮಣ, ಪೊಲೀಸರ ಹಲ್ಲೆ ಸೇರಿ 43 ಪ್ರಕರಣಗಳಿವೆ. ಸೋಲದೇವನಹಳ್ಳಿ ಸೇರಿ 3 ಠಾಣೆಗಳ ರೌಡಿಪಟ್ಟಿಯಲ್ಲಿ ಹೆಸರಿದೆ.

10 ಸಹಚರರ ಬಂಧನ: 2006ರಲ್ಲಿ ಸೂರಿ ಎಂಬುವನ ಜತೆಗೂಡಿ ಕಳ್ಳ ಸೀನ ಎಂಬಾತನನ್ನು ಭರತ ಹತ್ಯೆ ಮಾಡಿದ್ದ. 2014ರಲ್ಲಿ ಬ್ಯಾಡರಹಳ್ಳಿಯ ಮಹೇಶ್ ಗ್ಯಾಂಗ್​ನ ಸುರೇಶ್​ನನ್ನು ಕೊಲೆ ಮಾಡಿದ್ದ. ಬಳಿಕ ಕಾಮಾಕ್ಷಿಪಾಳ್ಯದಲ್ಲಿ ಮಹೇಶ್​ನನ್ನು ಹತ್ಯೆ ಮಾಡಿ ಸುರೇಶ್ ಕೊಲೆಗೆ ಭರತ ಪ್ರತೀಕಾರ ತೀರಿಸಿಕೊಂಡಿದ್ದ. ಜ.19ರಂದು ರಾಜಗೋಪಾಲನಗರದಲ್ಲಿ ಶ್ರೀನಿವಾಸ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ ಪುಂಡಾಟಿಕೆ ಮಾಡಿದ್ದ. ಇದೇ ಕೇಸ್​ನಲ್ಲಿ ಬಂಧಿಸಲು ಮುಂದಾಗಿದ್ದ ಪೇದೆ ಶಿವಸ್ವಾಮಿ ಎಂಬುವರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿ ತಪ್ಪಿಸಿಕೊಂಡಿದ್ದ. ಗುರುವಾರ ಎನ್​ಕೌಂಟರ್​ನಲ್ಲಿ ಮೃತಪಟ್ಟ ವಿಚಾರ ತಿಳಿದು ಆಸ್ಪತ್ರೆಗೆ ಬಂದಿದ್ದ 10 ಸಹಚರರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯಶ್ ಹತ್ಯೆಗೆ ಸಂಚು?: 2018ರಲ್ಲಿ ನಟ ಯಶ್ ಹತ್ಯೆಗೆ ಸ್ಲಂ ಭರತ ಸುಪಾರಿ ಪಡೆದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವನ್ನು ನಟ ಯಶ್ ಅಲ್ಲಗಳೆದಿದ್ದರು.

ಪ್ರಕರಣ ಸಿಐಡಿ ತನಿಖೆ: ಸ್ಲಂ ಭರತನ ಎನ್​ಕೌಂಟರ್ ಪ್ರಕರಣವನ್ನು ‘ಪೊಲೀಸರ ವಶದಲ್ಲಿ ಸಾವು’ ಆರೋಪದಡಿ ಸಿಐಡಿ ವಿಭಾಗ ತನಿಖೆ ನಡೆಸಲಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳ ಪರಿಶೀಲನೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಕೌಂಟರ್​ನಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಸಹ ಪ್ರಕರಣದಲ್ಲಿ ಸಿಐಡಿ ವಿಚಾರಣೆ ಎದುರಿಸಲಿದ್ದಾರೆ.

ಎನ್​ಕೌಂಟರ್ ಸಾಬೀತು ಸವಾಲು: ಈ ಪ್ರಕರಣವನ್ನು ಎನ್​ಕೌಂಟರ್ ಎಂದು ಸಾಬೀತು ಮಾಡುವುದು ತೀರಾ ಸವಾಲಿನ ಕೆಲಸವಾಗಿದೆ. ಎನ್​ಕೌಂಟರ್​ನಲ್ಲಿ ಸತ್ತವನು ಆರೋಪಿ ಅಷ್ಟೇ. ಆ ಪರಿಸ್ಥಿತಿಯಲ್ಲಿ ಎನ್​ಕೌಂಟರ್ ಮಾಡುವುದು ಅನಿವಾರ್ಯ ಎಂಬುದನ್ನು ಪೊಲೀಸರು ನಿರೂಪಿಸಬೇಕು. ಇಲ್ಲವಾದರೆ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ನಕಲಿ ಎನ್​ಕೌಂಟರ್ ಎಂದು ಸಾಬೀತಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಭರತನನ್ನು ಬಂಧಿಸಿ ಕರೆತರುತ್ತಿದ್ದಾಗ ಆತನ ಸಹಚರರು ದಾಳಿ ಮಾಡಿದರು. ಈ ವೇಳೆ ಭರತ ಪರಾರಿಯಾಗಿದ್ದು, ಬಂಧಿಸಲು ಹೋದ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಗಿದೆ. | ಎನ್. ಶಶಿಕುಮಾರ್ ಡಿಸಿಪಿ ಉತ್ತರ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net