ರೌಡಿಶೀಟರ್‌ನನ್ನು ಕಡಿದು ಕೊಲೆ

web kakke
Published on

ಮಂಗಳೂರು: ನಗರದ ಪಾಂಡೇಶ್ವರ ಬಳಿಯ ಎಮ್ಮೆಕೆರೆ ಮೈದಾನದ ಬಳಿ ಗುರುವಾರ ಸಂಜೆ ರೌಡಿ ಶೀಟರ್ ಯುವಕನನ್ನು ತಂಡವೊಂದು ಬರ್ಬರವಾಗಿ ಕಡಿದು ಕೊಲೆ ಮಾಡಿದೆ. ಹಲವು ಸಮಯಗಳಿಂದ ಮಂಗಳೂರು ನಗರದಲ್ಲಿ ಶಾಂತವಾಗಿದ್ದ ರೌಡಿ ಕಾಳಗ ಮತ್ತೆ ರಕ್ತ ಹರಿಸಿದೆ.

ಪಾಂಡೇಶ್ವರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರಾಹುಲ್(26) ಕೊಲೆಯಾದ ವ್ಯಕ್ತಿ. ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಅಲ್ಲಿಂದ ಅಟ್ಟಿಸಿಕೊಂಡು ಬಂದ ನಾಲ್ವರ ತಂಡ ಮೈದಾನದ ಬಳಿ ತಲವಾರುಗಳಿಂದ ಯದ್ವಾತದ್ವಾ ದಾಳಿ ಮಾಡಿ ಬರ್ಬರವಾಗಿ ಕೊಂದು ಹಾಕಿದೆ. ತಲೆ, ಮುಖ, ಎದೆ, ಹೊಟ್ಟೆ, ಕೈ ಸೇರಿದಂತೆ ದೇಹದಲ್ಲಿ 25ಕ್ಕೂ ಅಧಿಕ ಗಾಯ ಕಂಡು ಬಂದಿದೆ.

ಎಮ್ಮೆಕೆರೆ ತಂಡದ ಮಹೇಂದ್ರ ಮತ್ತಿತರ ನಾಲ್ಕು ಮಂದಿ ಯುವಕರು ಸೇರಿ ಹಳೇ ದ್ವೇಷ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಹೊಯ್ಗೆಬಜಾರ್ ನಿವಾಸಿಯಾಗಿದ್ದು ಅಲ್ಲಿನ ರೌಡಿ ತಂಡದಲ್ಲಿ ಗುರುತಿಸಿಕೊಂಡಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಇದೇ ರಾಹುಲ್, ಎಮ್ಮೆಕೆರೆಯ ಹುಲಿ ತಂಡದ ಸದಸ್ಯರೊಬ್ಬರ ಮನೆಯಲ್ಲಿ ಜಗಳ ಮಾಡಿ ಮಹೇಂದ್ರ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದ. ಇದೇ ದ್ವೇಷದಲ್ಲಿದ್ದ ತಂಡ ರಾಹುಲ್ ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂದಿದ್ದಾಗ ಅಲ್ಲಿಯೇ ತಕ್ಷಣ ಸಂಚು ರೂಪಿಸಿ ಹಳೇ ದ್ವೇಷವನ್ನು ಕೊಲೆಯ ಮೂಲಕ ತೀರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಘಟನೆ ನಡೆದ ಸ್ಥಳಕ್ಕೆ ಹಾಗೂ ಮೃತದೇಹವನ್ನಿಡಲಾಗಿದ್ದ ವೆನ್‌ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಪಾಂಡೇಶ್ವರ ಪೊಲೀಸರಿಗೆ ತನಿಖೆಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net