ಉಡುಪಿ ಹಿರಿಯಡ್ಕದಲ್ಲಿ ಹಾಡಹಗಲೇ ರೌಡಿಶೀಟರ್ ಹತ್ಯೆ

murder new
Published on

ಉಡುಪಿ: ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್‌ನನ್ನು ತಲವಾರುಗಳಿಂದ ಕೊಚ್ಚಿ ಕೊಂದ ಘಟನೆ ಗುರುವಾರ ನಡೆದಿದೆ. ಕಾರ್ಕಳ ತಾಲೂಕು ಇನ್ನ ನಿವಾಸಿ ಕಿಶನ್ ಹೆಗ್ಡೆ(35) ಮೃತ. ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ಮಣಿಪಾಲದಿಂದ ಹಿರಿಯಡಕ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಎರಡು ಕಾರುಗಳಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ಕಿಶನ್ ಹೆಗ್ಡೆಯನ್ನು ಹಿಂಬಾಲಿಸಿದ್ದು, ಹಿರಿಯಡಕ ಪೇಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಬಳಿ ಅಡ್ಡಗಟ್ಟಿದ್ದಾರೆ. ಕಿಶನ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ತಲವಾರುಗಳೊಂದಿಗೆ ಬಂದಿದ್ದ ತಂಡ ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಬಳಿಕ ಎರಡು ಕಾರುಗಳ ಪೈಕಿ ಒಂದನ್ನು ಅಲ್ಲಿಯೇ ಬಿಟ್ಟು ಇನ್ನೊಂದು ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಯುತ್ತಿದೆ ಎಂದು ಎಎಸ್‌ಪಿ ಕುಮಾರಚಂದ್ರ ವಿಜಯವಾಣಿಗೆ ತಿಳಿಸಿದ್ದಾರೆ. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಪ್ರಕರಣದಲ್ಲಿ ಭಾಗಿ: ಕೊಲೆಯಾದ ಕಿಶನ್ ಹೆಗ್ಡೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಎರಡು ವರ್ಷಗಳ ಹಿಂದೆ ರೌಡಿ ನವೀನ್ ಡಿಸೋಜ ಎಂಬಾತನನ್ನು ಕಾಂಜರಕಟ್ಟೆ ಬಾರ್ ಸಮೀಪ ಹತ್ಯೆ ಮಾಡಿದ್ದ ಕುರಿತು ಪ್ರಕರಣ ದಾಖಲಾಗಿತ್ತು. ಪಡುಬಿದ್ರಿಯಲ್ಲಿ ಕೊಲೆ ಸೇರಿದಂತೆ, ಕೊಲೆ ಯತ್ನ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸಶಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣ, ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಪುಣೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ, ಜತೆಗೆ ಇತರೆ ಹಣಕಾಸು, ರಿಯಲ್ ಎಸ್ಟೇಟ್‌ನಲ್ಲಿಯೂ ತೊಡಗಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net