ಮನೆ ಮುಂದೆಯೇ ರೌಡಿಶೀಟರ್ ಹತ್ಯೆ

21bdvt1
Published on

ಭದ್ರಾವತಿ: ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಮನೆಯ ಮುಂದೆಯೆ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ.
ಬೊಮ್ಮನಕಟ್ಟೆಯ ಮುಜಾಹಿದ್(35) ಕೊಲೆಯಾದವನು. ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ರೌಡಿಶೀಟರ್ ಪಟ್ಟಿ ತೆರೆಯಲಾಗಿತ್ತು. ಈತನ ಕೊಲೆಗೆ ವೈಯಕ್ತಿಕ ದ್ವೇಷಗಳಿರಬಹುದೆಂದು ಸಂಶಯ ವ್ಯಕ್ತಪಡಿಸಿರುವ ಪೊಲೀಸರು ನಾಲ್ಕೈದು ಜನರ ಗುಂಪೊಂದು ಕೃತ್ಯ ಎಸಗಿರಬಹುದೆಂದು ಅಂದಾಜಿಸಿದೆ. ಆತ ಮನೆಗೆ ಬರುವ ಸಮಯವನ್ನೇ ಕಾದು ಹೊಂಚು ಹಾಕಿ ಕೊಲೈಗೈದಿದ್ದು ಮನೆಯ ಮುಂದೆಯೆ ಆತನ ಬೈಕ್ ಕೂಡ ಬಿದ್ದಿದೆ. ತಲೆಗೆ ಹಾಗೂ ಮುಖದ ಮೇಲೆ ಮಚ್ಚಿನಿಂದ ಸೀಳಿದಂತಹ ಗುರುತು ಕಂಡು ಬಂದಿದೆ. ಅಲ್ಲದೆ ಆಟೋ ರಿಕ್ಷಾದ ಕಿಕ್ಕರ್ ಸ್ಟಾರ್ಟರ್ ರಾಡ್ ದೊರೆತಿದೆ.
ಶುಕ್ರವಾರ ಮುಂಜಾನೆ ಸ್ಥಳಕ್ಕಾಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ, ಜಿತೇಂದ್ರ ದಯಾಮ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದರು. ಬೆರಳಚ್ಚು ಹಾಗೂ ಶ್ವಾನದಳ, ವಿಧಿ ವಿಜ್ಞಾನ ತಜ್ಞರ ತಂಡ ಕೂಡ ಆಗಮಿಸಿ ತನಿಖೆ ಕೈಗೊಂಡಿದೆ. ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net