

ಉಡುಪಿ: ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಆರೋಪದಡಿ ಗಂಗೊಳ್ಳಿ ಚಾಮಿಯಾ ಮೊಹಲ್ಲಾ ಮೀನು ಮಾರ್ಕೆಟ್ ಬಳಿಯ ನಿವಾಸಿ ರೌಡಿಶೀಟರ್ ಮೊಹಮ್ಮದ್ ಸುಭಾನ್ (25) ಎಂಬಾತನನ್ನು ಆರು ತಿಂಗಳು ಗಡೀಪಾರು ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈತ 20ನೇ ವಯಸ್ಸಿನಿಂದಲೇ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತನ್ನ ಸಹಚರರೊಂದಿಗೆ ಸೇರಿಕೊಂಡು ತಂಡವನ್ನು ಕಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ದನ ಕಳ್ಳತನ ಹಾಗೂ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ಗೂಂಡಾ ಪ್ರವೃತ್ತಿಗೆ ಹೆದರಿಕೊಂಡು ಈತನ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಈತನ ವಿರುದ್ಧ ಗಂಗೊಳ್ಳಿ, ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರಕರಣ ದಾಖಲಾಗಿದೆ.
ಅನೇಕ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೊಳಪಟ್ಟಿದರೂ ನಡವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳದೇ ತನ್ನ ಅಪರಾಧಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ನಂತರ ಪುನಃ ಕ್ರಿಮಿನಲ್ ಚಟುವಟಿಕೆಗಳಲ್ಲಿ, ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದು, ಗಂಗೊಳ್ಳಿ ಪಿ.ಎಸ್.ಐ ಸಲ್ಲಿಸಿದ ವರದಿ ಪರಿಶೀಲನೆ ನಡೆಸಿ ಅ.17ರಂದು 6 ತಿಂಗಳ ಕಾಲ ಚಳ್ಳಕೆರೆ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. 6 ತಿಂಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಕಂಡು ಬಂದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.