

ವಿಜಯಪುರ:ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ವಿಜಯಪುರ ನಗರ ನಿವಾಸಿ ಯುನಸ್ ಇಕ್ಲಾಸ್ ಪಟೇಲ್ (35) ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಘಟನೆ ವಿವರ : ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್ ನಿನ್ನೆ ಓರ್ವನಿಗೆ ಚಾಕು ತೋರಿಸಿ 25 ಸಾವಿರ ರೂ. ದರೋಡೆ ಮಾಡಿದ್ದನಲ್ಲದೇ, ನಂತರ ಆತನ ಸ್ಕೂಟಿ ಸಮೇತ ತೆಗೆದುಕೊಂಡು ಪರಾರಿಯಾಗಿದ್ದ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ಚುರುಕಿನ ಕಾರ್ಯಾಚರಣೆ ಕೈಗೊಂಡ ಗಾಂಧಿಚೌಕ್ ಠಾಣೆ ಪೊಲೀಸರು ಶುಕ್ರವಾರ ತಡರಾತ್ರಿ ಆರೋಪಿ ಯುನಸ್ ತನ್ನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದತ್ತ ತೆರಳುತ್ತಿರುವ ಮಾಹಿತಿ ಅರಿತು ಸಿಂದಗಿ ತಾಲೂಕಿನ ರಾಂಪುರ ಬಳಿ ಆರೋಪಿ ಯುನಸ್ನನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿ ತಪ್ಪಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಇನ್ಸ್ಪೆಕ್ಟರ್ ಪ್ರದಿಪ ತಳಕೇರಿ ಆರೋಪಿಗೆ ಶರಣಾಗಲು ಎಚ್ಚರಿಕೆ ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಹಲ್ಲೆಗೆ ಮುಂದಾದಾಗ ಇನ್ಸ್ಪೆಕ್ಟರ್ ಪ್ರದಿಪ ತಳಕೇರಿ ಆತ್ಮ ರಣೆಗಾಗಿ ಆರೋಪಿ ಯುನಸ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡು ತಾಗಿದ ರಭಸಕ್ಕೆ ಯುನಸ್ಗೆ ತೀವ್ರ ರಕ್ತಸ್ರಾವವಾಗಿದೆ. ತಣವೇ ಪೊಲೀಸರು ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ರೌಡಿಶೀಟರ್ ಯುನಸ್ ಮೃತಪಟ್ಟಿದ್ದಾನೆ.
ಮೃತ ರೌಡಿಶೀಟರ್ ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ ಸೇರಿ ಒಟ್ಟು 12 ಪ್ರಕರಣಗಳಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
* ಫೋಟೋ : ವಿಜೆಪಿ&18&ಯುನಸ್
ಯುನಸ್ ಇಕ್ಲಾಸ್ ಪಟೇಲ್