ಮಂಗಳೂರಿನಲ್ಲಿ ರೌಡಿ ಶೀಟರ್ ಹತ್ಯೆ

murder new
Published on

ಮಂಗಳೂರು: ಬೊಕ್ಕಪಟ್ಣದ ರೌಡಿ ಶೀಟರ್ ಇಂದ್ರಜಿತ್(28)ನನ್ನು ಕುದ್ರೋಳಿಯ ಕರ್ನಲ್ ಗಾರ್ಡನ್ ಬೋಟ್ ಯಾರ್ಡ್ ಬಳಿ ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬುಧವಾರ ರಾತ್ರಿ 10ಕ್ಕೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಆತ ಪರಿಚಯದವರ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಅಲ್ಲಿಂದ ತಡರಾತ್ರಿ ಮನೆಗೆ ಬರುವಾಗ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕರ್ನಲ್ ಗಾರ್ಡ್‌ನ್ ಬೋಟ್ ಯಾರ್ಡ್ ಬಳಿಯ ಪರಿಚಿತರು ಇಂದ್ರಜಿತ್‌ನ ತಂಗಿಯ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಾಯಿ ಕುಸುಮಾ ಅವರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಎಡ ಕಿಬ್ಬೊಟ್ಟೆ ಬಳಿ, ಹಣೆ, ಎಡ ಕಣ್ಣಿನ ಬಳಿ, ಎರಡೂ ಬದಿಯ ಕೆನ್ನೆಗಳಲ್ಲಿ, ಬಾಯಿಯ ಬಳಿ, ತಲೆಯ ಭಾಗಕ್ಕೆ ಹಾಗು ಎರಡೂ ಕಾಲುಗಳಿಗೆ ಮಾರಕಾಯುಧಗಳಿಂದ ಕೊಚ್ಚಿದ ಗಾಯವಾಗಿರುವುದು ಕಂಡು ಬಂದಿದೆ. ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ರಾತ್ರಿ 10ರಿಂದ ಬೆಳಗ್ಗೆ 7ರ ನಡುವೆ ಕೊಲೆ ಮಾಡಿದ್ದಾರೆ ಎಂದು ತಂಗಿ ಬರ್ಕೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇಂದ್ರಜಿತ್ ಕೊಲೆ ಯತ್ನ, ಹಲ್ಲೆ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಮೇಲೆ ಹಿಂದೆಯೂ ತಂಡವೊಂದು ದಾಳಿ ನಡೆಸಿತ್ತು.

ನಗರದಲ್ಲಿ ಹೆಚ್ಚುತ್ತಿದೆ ರಕ್ತ ಸಂಘರ್ಷ

ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲವು ಸಮಯಗಳಿಂದ ಕೊಲೆ, ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಲಶೇಖರದಲ್ಲಿ ತಾಪಂ ಮಾಜಿ ಸದಸ್ಯ ಯೂಸುಫ್ ಕೊಲೆ ಯತ್ನ, ಗುರುಪುರದಲ್ಲಿ ಅಬ್ದುಲ್ಲಾ ಕೊಲೆ ಯತ್ನ, ಫಳ್ನೀರ್‌ನಲ್ಲಿ ಶೂಟೌಟ್, ಫಳ್ನೀರ್ ಯುನಿಟಿ ಆಸ್ಪತ್ರೆ ಬಳಿ ನೌಷಾದ್ ಕೊಲೆ ಯತ್ನ, ಸುರತ್ಕಲ್‌ನಲ್ಲಿ ಮಹಿಳೆಯ ಕೊಲೆಗೈದು ಹೂವಿನ ವ್ಯಾಪಾರಿ ಆತ್ಮಹತ್ಯೆ ಸೇರಿದಂತೆ ರಕ್ತ ಹರಿಯುವ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net