

ಬಂಟ್ವಾಳ: ನಗ್ರಿ ಶಾಂತಿನಗರ ಎಂಬಲ್ಲಿ ಕಾರಿನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಭಾನುವಾರ ಸಂಜೆ ಮೃತದೇಹ ಪತ್ತೆಯಾಗಿದ್ದು, ಅದು ಕೇರಳ ಮೂಲದ ನಟೋರಿಯಸ್ ರೌಡಿ, ದರೋಡೆಕೋರ ಮುತ್ತಾಸಿಮ್ ಯಾನೆ ತಸ್ಲಿಮ್ ಎಂಬುವನದೆಂದು ಪೊಲೀಸರು ತಿಳಿಸಿದ್ದಾರೆ.
ಸಜೀಪಮೂಡ ಗ್ರಾಮದ ಬೊಳ್ಳಾಯಿ ಸಮೀಪ ನಗ್ರಿ ಎಂಬಲ್ಲಿ ರಸ್ತೆ ಬದಿ ಇರುವ ಗುಡ್ಡ ಪ್ರದೇಶದ ಮೈದಾನದಲ್ಲಿ ಭಾನುವಾರ ಕಾರೊಂದು ಅನಾಥ ಸ್ಥಿತಿಯಲ್ಲಿ ನಿಂತಿದ್ದುದು ಕಂಡುಬಂತು. ಪರಿಶೀಲಿಸಿದಾಗ ಅದರ ಹಿಂಬದಿ ಸೀಟಿನಲ್ಲಿ ಸುಮಾರು 40ರಿಂದ 50 ವರ್ಷ ಹರೆಯದ ವ್ಯಕ್ತಿಯ ಶವ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ವೇಳೆ ಅದು ಮುತ್ತಾಸಿಮ್ ಯಾನೆ ತಸ್ಲೀಮ್‌ನದು ಎಂದು ಗೊತ್ತಾಗಿದೆ. ತಸ್ಲೀಂನನ್ನು ಕೊಂದು ಮೃತದೇಹವನ್ನು ಕಾರಿನಲ್ಲಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕಾರಿನ ನೋಂದಣಿ ಸಂಖ್ಯೆ ಅನ್ವಯ ಅದು ಬೆಂಗಳೂರು ಮೂಲದ ವಾಹನ ಎನ್ನಲಾಗಿದೆ.
ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸೈ ಅವಿನಾಶ್, ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಸಿಬ್ಬಂದಿ ವಿಜಯ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿಯಿಂದ ಕಿಡ್ನಾಪ್ ?
ನಟೋರಿಯಸ್ ರೌಡಿಶೀಟರ್ ಮುತ್ತಾಸಿಮ್‌ನನ್ನು ಅಪಹರಿಸಿ ಕೊಲೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬೆಳಗಾವಿಯಿಂದ ಈತನನ್ನು ತಂಡವೊಂದು ಕಿಡ್ನಾಪ್ ಮಾಡಿ ಕೊಲೆಗೈದು ಕಾರಿನಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದೆ. ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಇತ್ತೀಚೆಗಷ್ಟೇ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದ. ಅಲ್ಲಿಂದ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಜೈಲಿನಿಂದ ಹೊರ ಬಂದ ತಕ್ಷಣವೇ ತಂಡ ಈತನನ್ನು ಕಿಡ್ನಾಪ್ ಮಾಡಿ ಕೊಲೈಗೈದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನದಟ್ಟಣೆ: ಕಾರಿನಲ್ಲಿ ಅಪರಿಚಿತ ಶವ ಪತ್ತೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದೆ. ರಸ್ತೆ ಬದಿವಾಹನಗಳನ್ನು ನಿಲ್ಲಿಸಿ ಸ್ಥಳದಲ್ಲಿ ಜನ ಜಮಾಯಿಸಿದ ಪರಿಣಾಮ ಸಂಚಾರದಟ್ಟಣೆ ಏರ್ಪಟ್ಟಿತು. ಘಟನಾ ಸ್ಥಳದಲ್ಲಿ ರಿಬ್ಬನ್ ಅಳವಡಿಸಿ ಪೊಲೀಸರು. ಜನರನ್ನು ನಿಯಂತ್ರಿಸಿದರು.