ರಸ್ತೆ ಮಧ್ಯೆಯೇ ಹುಟ್ಟುಹಬ್ಬ ಆಚರಿಸಿಕೊಂಡ ರೌಡಿ

Rowdy
Published on

ಬೆಂಗಳೂರು: ಕರೊನಾ ಭೀತಿ ನಡುವೆಯೂ ನೂರಾರು ಜನರನ್ನು ಸೇರಿಸಿ ರಸ್ತೆಮಧ್ಯೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ರೌಡಿ ಹಾಗೂ ಸಹಚರರ ವಿರುದ್ಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಲ್ಲಸಂದ್ರದ ನಿವಾಸಿ ಕೃಷ್ಣಮೂರ್ತಿ ಹಾಗೂ ಸಹಚರರಾದ ರವಿ ಮತ್ತು ನವೀನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿ ಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರ ಹೊರಡಿಸಿರುವ ಕರೊನಾ ಮಾರ್ಗಸೂಚಿಗಳನ್ನು ಪಾಲಿಸದ ಕೃಷ್ಣಮೂರ್ತಿ, ಜೂ.24ರಂದು ತನ್ನ ನಿವಾಸದ ಬಳಿ 150ಕ್ಕೂ ಹೆಚ್ಚು ಜನರನ್ನು ಸೇರಿಸಿ ರಸ್ತೆ ಮಧ್ಯೆ ಹುಟ್ಟುಹಬ್ಬ ಆಚರಿಸಿ, ಅದರ ವಿಡಿಯೋ ಹಾಗೂ ಫೋಟೋಗಳನ್ನು ವ್ಯಾಟ್ಸ್ ಆಪ್ ಮತ್ತು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾನೆ. ಪಾರ್ಟಿಯಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಮತ್ತು ಸಹಚರರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಕೃಷ್ಣಮೂರ್ತಿ ಈ ಹಿಂದೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ರೌಡಿ ಪಟ್ಟಿಯಲ್ಲಿ ಹೆಸರಿತ್ತು. 3 ವರ್ಷಗಳ ಹಿಂದೆ ರೌಡಿ ಪಟ್ಟಿಯಿಂದ ಆತನ ಹೆಸರನ್ನು ಕೈ ಬಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net