ಹಾಡಹಗಲೇ ರೌಡಿಶೀಟರ್ ಹತ್ಯೆ, ಹಳೇ ದ್ವೇಷದಿಂದ ಕೃತ್ಯ ಕೊಲೆಯಾದ ಬಟಾಣಿ ಜಾಮೀನಿನ ಮೇಲೆ ಹೊರಬಂದಿದ್ದ

30ank news and photos 01
Published on

ಆನೇಕಲ್: ಹಳೇ ವೈಷ್ಯಮ ಹಿನ್ನೆಲೆಯಲ್ಲಿ ತಾಲೂಕಿನ ಅತ್ತಿಬೆಲೆ ಬಳಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ತಾಲೂಕಿನ ಬೆಸ್ತಮಾನಹಳ್ಳಿಯ ವಿನೀತ್ (23) ಅಲಿಯಾಸ್ ಬಟಾಣಿ ಕೊಲೆಯಾದವ.

ಈತ ಅತ್ತಿಬೆಲೆ ರಸ್ತೆಯ ಶೆಟ್ಟಿಹಳ್ಳಿ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ಬೆಳಗ್ಗೆ 8.30 ಸುಮಾರಿಗೆ ಕೆಲಸಕ್ಕೆಂದು ಹೊರಟಿದ್ದ. ಕಂಪನಿಯ ಎದುರಿನ ರಸ್ತೆಯಲ್ಲಿಯೇ ಎರಡು ಬೈಕ್‌ಗಳಲ್ಲಿ ಬಂದ ಮೂವರು ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಬರ್ಬರವಾಗಿ ಕೊಲೆಯಾದ ಬೆಸ್ತಮಾನಹಳ್ಳಿಯ ಸುನೀಲ್‌ನ ಆಪ್ತನಾಗಿ ಗುರುತಿಸಿಕೊಂಡಿದ್ದ ವಿನೀತ್ ಮೂರು ವರ್ಷದ ಹಿಂದೆ ದೇವರಾಜ್ ಎನ್ನುವವನ ಹತ್ಯೆ ಪ್ರಕರಣದ ಎ1 ಆರೋಪಿ ಜತೆಗೆ ರೌಡಿ ಶೀಟರ್ ಆಗಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದು ಶೆಟ್ಟಿಹಳ್ಳಿ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ.

ಮೂವರು ಯುವಕರ ತಂಡ ಕೊಲೆ ಮಾಡಿದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳ ಪರಿಶೀಲಿಸಿದ ಅತ್ತಿಬೆಲೆ ಪೊಲೀಸರು ದೂರು ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬೆಚ್ಚಿಬಿದ್ದ ಜನ: ಹಾಡುಹಗಲಲ್ಲೇ ನೂರಾರು ಜನ ಓಡಾಡುತ್ತಿದ್ದ ರಸ್ತೆಯಲ್ಲಿ ಯುವಕನ ಕೊಲೆಯಾಗಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಹಾಗೂ ಅಕ್ಕಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಜನ ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು.

ಯುವಕ ಕೆಲಸಕ್ಕೆಂದು ಬರುತ್ತಿದ್ದಾಗ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದು ವಿನೀತ್‌ನನ್ನು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಈಗಾಗಲೇ ಎರಡು ತಂಡಗಳನ್ನು ರೂಪಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು. ಲಕ್ಷ್ಮೀಗಣೇಶ್ ಅಡಿಷನಲ್ ಎಸ್‌ಪಿ, ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net