ಸಮಗ್ರ ನೋಟ 2019| ಗುಂಡಿಯಿಂದ ಮೇಲೇಳದ ಬಿಬಿಎಂಪಿ

ROUND-UP-3 31 DEC 19
Published on
ಬೃಹತ್ ಬೆಂಗಳೂರಿನ ಹೊಣೆ ಹೊತ್ತ ಬಿಬಿಎಂಪಿ ಕಸ ನಿರ್ವಹಣೆ ಸೇರಿ ಅನೇಕ ಸುಧಾರಣೆಗೆ ಪ್ರಯತ್ನಿಸಿತಾದರೂ ರಸ್ತೆ ಗುಂಡಿ,ಸುಮನಹಳ್ಳಿ ಸೇತುವೆ ಕುಸಿತ, ಹುಳಿಮಾವು ಹಾಗೂ ಹೊಸಕೆರೆಹಳ್ಳಿ ಕೆರೆ ಏರಿ ಒಡೆತದಂತಹ ನಕಾರಾತ್ಮಕ ಸುದ್ದಿಗೇ ಗ್ರಾಸವಾಯಿತು. ರಾಜ್ಯದ ಮಟ್ಟದಲ್ಲಿ ನಡೆಯುತ್ತಿದ್ದ ರಾಜಕೀಯಕ್ಕೆ ಅನುಗುಣವಾಗಿ ಎಲ್ಲ ಪಕ್ಷಗಳೂ ಸ್ಥಾಯಿ ಸಮಿತಿ ಚುನಾವಣೆಯನ್ನೇ ಬಹಿಷ್ಕರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ರಾಜ್ಯ ರಾಜಕಾರಣ ಎಷ್ಟರ ಮಟ್ಟಿಗೆ ತನ್ನನ್ನು ಪ್ರಭಾವಿಸುತ್ತಿದೆ ಹಾಗೂ ಸ್ವಾತಂತ್ರ್ಯ ಎಷ್ಟಿದೆ ಎಂಬುದನ್ನು ಪಾಲಿಕೆ ಜಗಜ್ಜಾಹೀರು ಮಾಡಿಕೊಂಡಿತು. ಐದನೇ ವರ್ಷ ಬಿಜೆಪಿಗೆ ಪಟ್ಟ ಸಿಕ್ಕಿದ್ದು ಸೇರಿ ಕೆಲವು ಗಮನಿಸುವ ಘಟನೆಗಳು 2019ರಲ್ಲಿ ನಡೆದಿವೆ.

ಅಕ್ರಮ ಕಟ್ಟಡ ಮುಂದುವರಿಕೆ

ಬೆಂಗಳೂರಿನ ಸಂಚಾರ, ನೀರು, ರ್ಪಾಂಗ್ ಸಮಸ್ಯೆಗೆ ಇಂಬು ನೀಡುತ್ತಿರುವ ಅಕ್ರಮ ಕಟ್ಟಡ ವಿವಾದದ ಕುರಿತು ಹೈಕೋರ್ಟ್ ತುಸು ಹೆಚ್ಚು ಚಾಟಿ ಬೀಸಿತು. ಬೆಂಗಳೂರಿನಲ್ಲಿ ಕೇವಲ 980 ಅಕ್ರಮ ಕಟ್ಟಡಗಳಿವೆ ಎಂಬ ಬಿಬಿಎಂಪಿಯ ಹಾಸ್ಯಾಸ್ಪದ ಪಟ್ಟಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಹೊಸದಾಗಿ ಸರ್ವೆ ನಡೆಸುವಂತೆ ಬಿಬಿಎಂಪಿಗೆ ನ್ಯಾಯಾಲಯ ಸೂಚಿಸಿತು. ಅಕ್ರಮ ಕಟ್ಟಡಗಳ ಕುರಿತು ಬಿಬಿಎಂಪಿ ಕ್ರಮ ಕೈಗೊಳ್ಳದಿದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಸಂಸದ ರಾಜೀವ್ ಚಂದ್ರಶೇಖರ್ ನೀಡಿದ ಕರೆಗೆ ನೂರಾರು ಮನವಿಗಳು ಸಲ್ಲಿಕೆಯಾದವು.

ರಸ್ತೆ ಗುಂಡಿ ಸದ್ದು

ಪ್ರತಿ ವರ್ಷದಂತೆಯೇ ಬೆಂಗಳೂರಿನ ರಸ್ತೆ ಗುಂಡಿಗಳು ಈ ಬಾರಿಯೂ ಬಿಬಿಎಂಪಿಗೆ ಮುಖಭಂಗ ಉಂಟುಮಾಡಿದವು. ಈ ಬಾರಿಯಂತೂ ಸ್ವತಃ ಹೈಕೋರ್ಟ್ ನಿರ್ದೇಶನ ನೀಡಿ ಗಡುವು ವಿಧಿಸಿದ್ದರಿಂದ ಸಾವಿರಾರು ಗುಂಡಿಗಳನ್ನು ಬಿಬಿಎಂಪಿ ಭರದಲ್ಲಿ ಮುಚ್ಚಿತು. ಬೆಂಗಳೂರಿನ ರಸ್ತೆ ಗುಂಡಿಗಳು ಚಂದ್ರನ ಮೇಲ್ಮೈನಂತಿದೆ ಎಂದು ಕಲಾವಿದ ಬಾದಲ್ ನಂಜುಂಡಸ್ವಾಮಿ ಮಾಡಿದ ಅಣಕು ವಿಡಿಯೋ ಅಂತಾರಾಷ್ಟ್ರೀಯ ಮಟ್ಟದವರೆಗೂ ಬಿಬಿಎಂಪಿಗೆ ಅಪಖ್ಯಾತಿ ಉಂಟುಮಾಡಿತು.

ರಸ್ತೆ ಗುಂಡಿಯ ಕಾರಣಕ್ಕೆ ಅಪಾಯಕ್ಕೆ ಒಳಗಾಗುವ ನಾಗರಿಕರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ತಿಳಿಸಿತು. ನ್ಯಾಯಾಲಯ ಒತ್ತಾಯದ ಮೇರೆಗೆ ಬಿಬಿಎಂಪಿ ಈ ಬಗ್ಗೆ ಜಾಹೀರಾತು ನೀಡಿ, ಅಪಾಯಕ್ಕೆ ಒಳಗಾದ ಸಾರ್ವಜನಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದಿತು. ಆದರೆ ಪರಿಹಾರ ನೀಡುವ ಕುರಿತು ಇನ್ನೂ ನಿರ್ಧಾರ ಆಗಿಲ್ಲ.

ಅಕ್ರಮ-ಸಕ್ರಮ ಗಾಳಿ

ಬೈಲಾ ಉಲ್ಲಂಘಿಸಿ ನಿರ್ವಿುಸಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಒಂದಷ್ಟು ತೆರಿಗೆ ಹೆಚ್ಚಿಸಿಕೊಳ್ಳುವ ರಾಜ್ಯ ಸರ್ಕಾರದ ಈ ಹಿಂದಿನ ನಿರ್ಧಾರ ನ್ಯಾಯಾಲಯದಲ್ಲಿ ಇರುವ ನಡುವೆಯೇ ಮತ್ತೊಮ್ಮೆ ಸರ್ಕಾರ ಈ ಬಗ್ಗೆ ಚರ್ಚೆ ಆರಂಭಿಸಿತು. ಅಕ್ರಮ ಸಕ್ರಮಕ್ಕೆ ಸಮಿತಿ ರಚಿಸಲಾಗುತ್ತದೆ ಎಂದು 2019ರ ಲೋಕಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ ತಿಳಿಸಿತ್ತು.

ಆದರೆ ಇದೀಗ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಬಿಡಿಎ ಬಡಾವಣೆಗಳಲ್ಲಿನ ಅಕ್ರಮವನ್ನು ಮಾತ್ರ ಸಕ್ರಮಗೊಳಿಸುವುದಾಗಿ ಹೊಸ ಪ್ರಯತ್ನವೊಂದನ್ನು ಆರಂಭಿಸಿತು. ಸುಮಾರು 75 ಸಾವಿರ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಕುರಿತು ನಿಯಮ ರೂಪಿಸಲು ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು.

ತಲ್ಲಣ ಉಂಟುಮಾಡಿದ ಅಶುದ್ಧ ನೀರು

ರಾಜ್ಯದ ಆರನೇ ಒಂದು ಭಾಗ ಜನಸಂಖ್ಯೆ ವಾಸಿಸುವ ಬೆಂಗಳೂರಿಗೆ ಜಲಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಸರಬರಾಜು ಮಾಡುವ ಕುಡಿಯುವ ನೀರು ಕಳಪೆ ಗುಣಮಟ್ಟದ್ದು ಎಂದು ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (ಬಿಐಎಸ್) ವರ್ಷಾಂತ್ಯದಲ್ಲಿ ನೀಡಿದ ವರದಿ ಚರ್ಚೆಗೆ ಕಾರಣವಾಯಿತು.

ಬೆಂಗಳೂರಿನ ಮತ್ತಿಕೆರೆ, ಮಾಗಡಿ ರಸ್ತೆ, ರಾಜಾಜಿನಗರ, ಜಾಲಹಳ್ಳಿ ಪಶ್ಚಿಮ, ಚಿಕ್ಕಪೇಟೆ, ಬನಶಂಕರಿ, ಜಯನಗರ, ಕಮಲಾನಗರ, ವಿದ್ಯಾರಣ್ಯಪುರ ಹಾಗೂ ದೇವನಹಳ್ಳಿಯ ವಿಜಯಪುರದಿಂದ, ನಲ್ಲಿ ಮೂಲಕ ಹರಿದು ಗ್ರಾಹಕರು ನೀರು ಪಡೆಯುವ ಅಂತಿಮ ಹಂತದಲ್ಲಿ ಸಂಗ್ರಹಿಸಿದ ಮಾದರಿಗಳು ಒಂದಲ್ಲ ಒಂದು ಪರೀಕ್ಷೆಯಲ್ಲಿ ಫೇಲ್ ಆಗಿದ್ದವು. ಆದರೆ ತಾನು ಪ್ರತಿನಿತ್ಯ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡುತ್ತಿದ್ದು, ಉತ್ತಮವಾಗಿದೆ ಎಂದು ಜಲಮಂಡಳಿ ಸ್ಪಷ್ಟನೆ ನೀಡಿತು. ಸಂಪೂರ್ಣ ವರದಿಯನ್ನು ನೀಡುವಂತೆ ಬಿಐಎಸ್​ಗೆ ಜಲಮಂಡಳಿ ಪತ್ರ ಬರೆಯಿತು.

ಅಧಿಕಾರಿಗೆ ಛೀಮಾರಿ

ಬೆಳ್ಳಂದೂರು, ಅಗರ ಮತ್ತು ವರ್ತರು ಕೆರೆಮಾಲಿನ್ಯ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಛೀಮಾರಿ. ಕೆರೆ ಕಲುಷಿತಗೊಳ್ಳದಂತೆ ಎಸ್​ಟಿಪಿಗಳ ನಿರ್ವಣಗೊಳಿಸಿ,ಕೆರೆ ನೀರು ಮಲಿನವಾಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಿತು. ಲೋಕಾಯುಕ್ತದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ ದೂರಿನ ಮೇರೆಗೆ ಕೆರೆಗಳ ಒತ್ತುವರಿ ತೆರವು, ಕಲುಷಿತ ನೀರು ಬಿಡುಗಡೆಯಂತಹ ಸಮಸ್ಯೆ ಕುರಿತು ವಿಚಾರಣೆ ನಡೆಯುತ್ತಿದೆ.

ತಗ್ಗಿದ ಜಾಹೀರಾತು ಫಲಕಗಳ ಆರ್ಭಟ

ನಗರದ ಅಂದಕ್ಕೆ ಧಕ್ಕೆ ತರುವಷ್ಟು ಜಾಹೀರಾತು ಫಲಕಗಳು ತಲೆ ಎತ್ತಿದ್ದವು. ಹೈಕೋರ್ಟ್ ಬಿಬಿಎಂಪಿಗೆ ತರಾಟೆ ತೆಗೆದುಕೊಂಡು ಎಲ್ಲ ಜಾಹೀರಾತು ಫಲಕ ತೆರವಿಗೆ ಸೂಚನೆ ನೀಡಿತು. ಹೀಗಾಗಿ ನಗರದ ಬ್ಯಾನರ್, ಬಂಟಿಂಗ್ಸ್, ಕಟೌಟ್, ಪೋಸ್ಟರ್ ಮತ್ತು ಗೋಡೆಬರಹಗಳನ್ನು ತೆರವುಗೊಳಿಸಿದೆ.

ಕೆರೆಗಳು ಒಡೆದು ಅವಾಂತರ

ಅಕ್ಟೋಬರ್ 10ರಂದು ದೊಡ್ಡಬಿದರಕಲ್ಲು ಕೆರೆ ಏರಿ ಒಡೆದ ಪರಿಣಾಮ ಪಕ್ಕದ ಭವಾನಿನಗರದ 500 ಮನೆಗಳು ಜಲಾವೃತವಾದವು. ನವೆಂಬರ್ 9ರ ಮಧ್ಯರಾತ್ರಿ ಹೊಸಕೆರೆಹಳ್ಳಿ ಕೆರೆ ಏರಿ ಒಡೆದು ಪ್ರಮೋದ್ ಹಾಗೂ ಪುಷ್ಪಗಿರಿ ಬಡಾವಣೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಯಿತು. ನ.24ರಂದು ಹುಳಿಮಾವು ಕೆರೆ ಏರಿ ಒಡೆದಿದ್ದರಿಂದ ಕೃಷ್ಣ ಲೇಔಟ್, ಅವನಿ ಶೃಂಗೇರಿ ನಗರ, ಡಿಎಲ್​ಎಫ್, ಸರಸ್ವತಿಪುರ, ರಾಯಲ್ ರೆಸಿಡೆನ್ಸಿ ಸೇರಿ 800 ಕ್ಕೂ ಹೆಚ್ಚು ಮನೆಗಳು, ಅಪಾರ್ಟ್​ವೆುಂಟ್​ಗಳು ಜಲಾವೃತಗೊಂಡವು. ಇದರಲ್ಲಿ 377 ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಯಿತು.

ಜಲಮಂಡಳಿ

  • ತಿಪ್ಪಗೊಂಡನಹಳ್ಳಿ ಜಲಾಶಯ ನವೀಕರಣ, 285 ಕೋಟಿ ರೂ. ವೆಚ್ಚದ ಕಾಮಗಾರಿ. ಎತ್ತಿನಹೊಳೆಯಿಂದ 1.70 ಟಿಎಂಸಿ ನೀರು ಲಭ್ಯ. ತಿಪ್ಪಗೊಂಡನಹಳ್ಳಿ ಜಲಾಶಯ ನವೀಕರಣಗೊಳಿಸುವ ಕಾಮಗಾರಿಗೆ ಡಾ.ಜಿ. ಪರಮೇಶ್ವರ್ ಚಾಲನೆ.
  • ಬೇಸಿಗೆ ನಿರ್ವಹಣೆಗೆ ಜಲಮಂಡಳಿ 7 ಸೂತ್ರ. ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ನೀರು ಪೂರೈಕೆಯಲ್ಲಿ ಕಡಿತ. ಬಿಬಿಎಂಪಿ ಉದ್ಯಾನವನಗಳಿಗೆ ಎಸ್​ಟಿಪಿ ನೀರು ಕಡ್ಡಾಯ. ಎಸ್​ಟಿಪಿ ಬಳಸದ ಅಪಾರ್ಟ್​ವೆುಂಟ್​ಗಳ ಮೇಲೆ ದೂರು ನಿರ್ಧಾರ.
  • ಹೆಬ್ಬಾಳದ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್​ನಲ್ಲಿ ನಿರ್ಮಾಣ ಹಂತದ ತ್ಯಾಜ್ಯ ನೀರು ಸಂಸ್ಕರಣಾ (100 ಎಂಎಲ್​ಡಿ ) ಘಟಕದ ಕಟ್ಟಡದ ಸೆಂಟ್ರಿಂಗ್ (ಗೋಪುರ) ಕುಸಿದು ಇಬ್ಬರು ಇಂಜಿನಿಯರ್​ಗಳು ಹಾಗೂ ಮೇಸ್ತ್ರಿ ಮೃತಪಟ್ಟಿದ್ದು, 17 ಮಂದಿಗೆ ಗಾಯಗಳಾಗಿದ್ದವು. ಮೂವರು ಅಧಿಕಾರಿಗಳ ಅಮಾನತು.
  • ಎಸ್​ಟಿಪಿ ನೀರು ಮಾರಾಟಕ್ಕೆ ಜಲಮಂಡಳಿ ಒತ್ತು.
  • ಜಲಮಂಡಳಿಯ ಎಸ್​ಟಿಪಿ ಅಲ್ಲದೆ ಅಪಾರ್ಟ್​ವೆುಂಟ್, ಹೋಟೆಲ್, ಖಾಸಗಿ ಕಟ್ಟಡಗಳಿಗೆ ಅಳವಡಿಸಿಕೊಂಡ ಎಸ್​ಟಿಪಿಗಳಿಂದ ವ್ಯರ್ಥವಾಗುವ ಸಂಸ್ಕರಿತ ನೀರನ್ನು ಪಡೆಯಲು ಆನ್​ಲೈನ್ ವ್ಯವಸ್ಥೆ ಮೂಲಕ ಮಾರಾಟಕ್ಕೆ ಜಲಮಂಡಳಿ ಚಿಂತನೆ. ಆನ್​ಲೈನ್ ಪೋರ್ಟಲ್​ಗೆ ಖಾಸಗಿ ಕಂಪನಿಯೊಂದಿಗೆ ಮಾತುಕತೆ.
  • ನೇರ ನೇಮಕಾತಿಗೆ ನಿರಾಕರಿಸಿದ ಆಡಳಿದ ಮಂಡಳಿ. ಸಿಬ್ಬಂದಿ ಕೊರತೆ, ನೇರ ನೇಮಕಾತಿಗೆ ನಿರಾಕರಿಸಿದ ಆಡಳಿದ ಮಂಡಳಿ.
  • ಜಲಮಂಡಳಿ ಯುಎಫ್​ಡಬ್ಲ್ಯು ಯೋಜನೆಯಿಂದ ನೀರಿನ ಸೋರಿಕೆ ಪ್ರಮಾಣ ಕಡಿಮೆ.
  • ಆರಂಭಿಕ ಶೇ.48 ಸೋರಿಕೆ ಇದ್ದ ನೀರಿನ ಪ್ರಮಾಣ ಈಗ ಶೇ.37ಕ್ಕೆ ಇಳಿಕೆ.

ಮೇಯರ್- ಉಪಮೇಯರ್ ಆಯ್ಕೆ

ಪ್ರತಿ ವರ್ಷದಂತೆ ಈ ವರ್ಷವೂ ಬಿಬಿಎಂಪಿಗೆ ಹೊಸ ಮೇಯರ್ ಹಾಗೂ ಉಪಮೇಯರ್ ಆಯ್ಕೆಯಾದರಾದರೂ ಐದನೇ ವರ್ಷದಲ್ಲಿ ಸಣ್ಣ ಬದಲಾವಣೆ ಆಯಿತು. ನಾಲ್ಕು ವರ್ಷ ಕಾಂಗ್ರೆಸ್ ಮೇಯರ್, ಜೆಡಿಎಸ್ ಉಪಮೇಯರ್ ಕಂಡಿದ್ದ ಪಾಲಿಕೆ ಈ ಬಾರಿ ರಾಜ್ಯ ಮಟ್ಟದಲ್ಲಿ ಆದ ರಾಜಕೀಯ ಪ್ರಭಾವದ ಕಾರಣಕ್ಕೆ ಬಿಜೆಪಿಗೆ ಒಲಿಯಿತು.

ಅಲ್ಲಿಯೂ ಅಚ್ಚರಿಯ ಬೆಳವಣಿಗೆಯಲ್ಲಿ ಎಂ. ಗೌತಮ್ ಕುಮಾರ್ ಹಾಗೂ ರಾಮಮೋಹನ ರಾಜು ಅವರು ಮೇಯರ್ ಹಾಗೂ ಉಪಮೇಯರ್ ಆದರು. ಕನ್ನಡದ ಬೆಂಗಳೂರಿಗೆ ಉತ್ತರ ಭಾರತ ಮೂಲದವರನ್ನು ಬಿಜೆಪಿ ಮೇಯರ್ ಮಾಡಿದೆ ಎಂಬ ಸಾಮಾಜಿಕ ಜಾಲತಾಣ ಅಭಿಯಾನ ಪ್ರಬಲವಾಗಲಿಲ್ಲ. ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸುವ ಕಾವೇರಿಗೆ ಪೂಜೆ ಸಮರ್ಪಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಮೇಯರ್ ಗೌತಮ್ ಕುಮಾರ್ ನಾಂದಿ ಹಾಡಿದರು.

| ಮಾಹಿತಿ: ರಮೇಶ ದೊಡ್ಡಪುರ, ದ್ವಾರಕಾನಾಥ್ ಎಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net