ರಸ್ತೆಗುಂಡಿ ಮುಚ್ಚಲು ಹಗಲು-ರಾತ್ರಿ ಕಾರ್ಯನಿರ್ವಹಣೆ: ಬೊಮ್ಮನಹಳ್ಳಿ ವಲಯ ಆಯುಕ್ತ ಹೇಳಿಕೆ

bhalli pathole
Published on

ಬೆಂಗಳೂರು: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಹಗಲು-ರಾತ್ರಿ ಕಾರ್ಯನಿರ್ವಹಿಸಿ ರಸ್ತೆಗುಂಡಿಗಳನ್ನು ಮುಚ್ಚುಲಾಗುತ್ತಿದ್ದು, ಇನ್ನುಳಿದ ಗುಂಡಿಗಳನ್ನು ತ್ವರಿತವಾಗಿ ದುರಸ್ತಿಪಡಿಸಲಾಗುವುದು ಎಂದು ವಲಯ ಆಯುಕ್ತೆ ರಮ್ಯಾ ತಿಳಿಸಿದರು.

ಜೆ.ಪಿ.ನಗರದ ನಂದಿನಿ ಹೋಟೆಲ್ ಬಳಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ಬಳಿಕ ಸೋಮವಾರ ಮಾತನಾಡಿದರು.

ರಸ್ತೆಗುಂಡಿಗಳನ್ನು ಮುಚ್ಚಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಬಾರದಿರುವ ಹಿನ್ನೆಲೆ ನಿರಂತರವಾಗಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿದೆ. ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆಗುಂಡಿಗಳನ್ನು ಮುಚ್ಚುತ್ತಿದ್ದು, ಇದೀಗ ವಾರ್ಡ್ ರಸ್ತೆಗಳಲ್ಲಿಯೂ ಗುಂಡಿಗಳನ್ನು ಪತ್ತೆಹಚ್ಚಿ ತಕ್ಷಣವೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರವಾಗಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಂದ ಹೆಚ್ಚು ಸಕ್ರಿಯವಾಗಿ ಗುಂಡಿ ಗಮನ ತಂತ್ರಾಶದಲ್ಲಿ ದೂರುಗಳು ಬರುತ್ತಿವೆ. ಸಾರ್ವಜನಿಕರಿಂದ ಬರುತ್ತಿರುವ ದೂರುಗಳನ್ನು ಕಾಲಮಿತಿಯೊಳಗಾಗಿ ಮುಚ್ಚಲಾಗುತ್ತಿದೆ ಎಂದು ಅವರು ವಿವರಿಸಿದರು.

ಪರಿಶೀಲನೆ ವೇಳೆ ಬೊಮ್ಮನಹಳ್ಳಿ ವಲಯದ ಮುಖ್ಯ ಅಭಿಯಂತರ ಶಶಿಕುಮಾರ್, ಕಾರ್ಯಪಾಲಕ ಅಭಿಯಂತರ ಜಯರಾಮ್ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ಡ್ ರಸ್ತೆಗಳ ದುರಸ್ತಿಗೆ ಸೂಚನೆ:

ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಮುಚ್ಚಿದ ಬಳಿಕ ವಾರ್ಡ್ ಮಟ್ಟದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲ ವಲಯಗಳ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಸೂಚಿಸಿದ್ದಾರೆ. ವಾರ್ಡ್ ಒಳಗಿನ ಬಡಾವಣೆಗಳಲ್ಲೂ ರಸ್ತೆಗಳಲ್ಲಿ ಗುಂಡಿ ಉಂಟಾಗಿದ್ದಲ್ಲಿ ಅವುಗಳನ್ನು ಗುರುತಿಸಿ ತ್ವರಿತವಾಗಿ ಮುಚ್ಚುವಂತೆ ಕಟ್ಟಪ್ಪಣೆ ಮಾಡಿದ್ದಾರೆ.

ಬೊಮ್ಮನಹಳ್ಳಿ ವಲಯ ರಸ್ತೆಗಳ ವಿವರ:

* ವಾರ್ಡ್ ರಸ್ತೆಗಳ ಸಂಖ್ಯೆ: 12,154

* ವಾರ್ಡ್ ರಸ್ತೆಗಳ ಉದ್ದ: 1,775.67 ಕಿ.ಮೀ.

* ಪ್ರಮುಖ ರಸ್ತೆಗಳ ಸಂಖ್ಯೆ: 39

* ಪ್ರಮುಖ ರಸ್ತೆಗಳ ಉದ್ದ: 134.7 ಕಿ.ಮೀ.

* ವಲಯದ ರಸ್ತೆಗಳ ಒಟ್ಟು ಉದ್ದ: 1,910.37 ಕಿ.ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net