

ಹರಿಪ್ರಸಾದ್ ನಂದಳಿಕೆ, ಶಿರ್ವ
ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಟಪಾಡಿ ಮಟ್ಟು ಗ್ರಾಮದಲ್ಲಿ ಬೆಳೆಯುವ ಮಟ್ಟುಗುಳ್ಳ ಕೃಷಿಗೆ ಅಪಾರ ಹಾನಿ ಉಂಟಾಗಿದೆ.
ಭೌಗೋಳಿಕ ಮಾನ್ಯತೆ (ಜಿಐ) ಹೊಂದಿರುವ ಮಟ್ಟುಗುಳ್ಳಕ್ಕೆ ವಿಶೇಷ ಬೇಡಿಕೆ ಇದ್ದು, ಗ್ರಾಮದ ನೂರಾರು ಎಕರೆ ಜಾಗದಲ್ಲಿ ರೈತರು ಮಟ್ಟುಗುಳ್ಳ ಬೆಳೆದಿದ್ದಾರೆ. ಆದರೆ ಭಾರಿ ಮಳೆಯಿಂದಾಗಿ ಗಿಡಗಳ ಬೆಳವಣಿಗೆ ಸರಿಯಾಗಿ ಆಗಿಲ್ಲ. ಇಳುವರಿ ತೀವ್ರ ಕುಸಿದಿದ್ದು, ಶೇ.5ರಷ್ಟು ಮಾತ್ರ ಲಭಿಸಿದೆ. ಎರಡು ದಿನಗಳಿಂದ ಮಟ್ಟುಗುಳ್ಳ ಬೆಳೆಯೇ ಕೈ ಸೇರಿಲ್ಲ. ಇದರಿಂದಾಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
ಗುಳ್ಳ ಗಿಡಗಳಿಗೆ ವಾರಕ್ಕೊಮ್ಮೆ ನೀರು ಸಿಂಪಡಣೆ ಮಾಡಿದರೆ ಸಾಕಾಗುತ್ತದೆ. ನೀರಿನ ಪ್ರಮಾಣ ಹೆಚ್ಚಾದಲ್ಲಿ ಗಿಡಗಳು ಕೊಳೆತು ಹೋಗುತ್ತವೆ. ಬೆಳೆಗಾರರು ಗಿಡಗಳನ್ನು ಮಲ್ಚಿಂಗ್ ಶೀಟ್ ಹಾಕಿ ನೆಟ್ಟಿದ್ದರೂ, ಸುತ್ತ ನೀರು ನಿಂತಿರುವುದರಿಂದ ಗಿಡಗಳು ಸಾಯುತ್ತಿವೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವವರು ಬೆಳೆದ ಬೆಳೆಯು ಮಳೆ ನೀರಲ್ಲಿ ಕೊಳೆತು ಹೋಗುವುದನ್ನು ಕಂಡು ಕಣ್ಣೀರು ಸುರಿಸುತ್ತಿದ್ದಾರೆ.
ಮಟ್ಟು ಗ್ರಾಮದ ಮಟ್ಟುಕೊಪ್ಲ, ಆಳಿಂಜೆ ಪ್ರದೇಶದ ಗದ್ದೆಗಳಲ್ಲಿ ಮಳೆ ನೀರು ನಿಂತು ಮಟ್ಟುಗುಳ್ಳ ಗಿಡಗಳು ಬಾಡಿ ಕೊಳೆತು ಹೋಗಿವೆ. ಇನ್ನು ಈ ಸೀಸನ್‌ನಲ್ಲಿ ಮತ್ತೆ ಗುಳ್ಳ ಬೆಳೆಯಲು ಸಾಧ್ಯವಾಗದು. ಈ ಭಾಗಕ್ಕೆ ದೊಡ್ಡ ಮಟ್ಟಿನ ಆರ್ಥಿಕ ಹೊಡೆತ ಬಿದ್ದಿದೆ ಎಂದು ಮಟ್ಟು ಬೆಳೆಗಾರ ಶ್ರೀರಾಮ್ ರಾವ್ ಮಟ್ಟು ತಿಳಿಸಿದ್ದಾರೆ.
ನಾಲ್ಕೈದು ವರ್ಷಗಳಿಂದ ಪ್ರತಿವರ್ಷ ಮಟ್ಟುಗುಳ್ಳ ಬೆಳೆಗೆ ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯುಂಟಾಗುತ್ತಿದೆ. ಆಗುತ್ತಿರುವ ನಷ್ಟಕ್ಕೆ ಶೀಘ್ರ ಪರಿಹಾರವನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕೃಷಿಕರು ಗಮನ ಸೆಳೆದಿದ್ದು, ಈಗಾಗಲೇ ಕೃಷಿ ವಿಜ್ಞಾನಿಗಳು, ತೋಟಗಾರಿಕೆ-ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ಕಡೆ ಗಿಡಗಳು ನಾಶವಾಗಿವೆ. ಕೆಲವು ಕಡೆ ಸೊರಗಿವೆ. ಗಿಡಗಳು ಸೂಕ್ಷ್ಮಜೀವಿಗಳಿಂದ ತೊಂದರೆಗೊಳಗಾಗಿದ್ದು, ಸಾರಜನಕ, ರಂಜಕ ಮತ್ತಿತರ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿವೆ. ಸೂಕ್ತ ಪೋಷಕಾಂಶಗಳನ್ನು ನೀಡುವಂತೆ ಹಾಗೂ ಗದ್ದೆಯಿಂದ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪರ್ಯಾಯಕ್ಕೆ ಮಟ್ಟುಗುಳ್ಳ ಕಷ್ಟ!: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯೋತ್ಸವದಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಜನವರಿಯಲ್ಲಿ ಈ ಬಾರಿ ಪರ್ಯಾಯೋತ್ಸವ ಇರುವುದರಿಂದ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಮಟ್ಟುಗುಳ್ಳ ಬೆಳೆದಿದ್ದಾರೆ. ಆದರೆ ಅತಿವೃಷ್ಟಿಯಿಂದಾಗಿ ಗುಳ್ಳ ಬೆಳೆ ಬಹುತೇಕ ನಾಶವಾಗಿರುವುದರಿಂದ ಪರ್ಯಾಯ ವೇಳೆ ಬೇಡಿಕೆಗೆ ಅನುಗುಣವಾಗಿ ಪೂರೈಸುವುದು ಕಷ್ಟ ಎನ್ನುತ್ತಿದ್ದಾರೆ ಬೆಳೆಗಾರರು.
ಮಲ್ಲಿಗೆ ಕೃಷಿಗೂ ಹಾನಿ: ನಿತ್ಯ ಮೋಡ ಕವಿದ ವಾತಾವರಣ ಮತ್ತು ಅತೀವ ಮಳೆಯ ಕಾರಣದಿಂದಾಗಿ ಶಂಕರಪುರ ಪ್ರದೇಶದಲ್ಲಿ ಮಲ್ಲಿಗೆ ಹೂವಿನ ಗಿಡಗಳಿಗೂ ಹಾನಿಯಾಗಿದ್ದು, ಮಳೆ ನೀರಿಗೆ ಗಿಡಗಳು ಕೊಳೆತು ಇಳುವರಿ ಕುಂಠಿತವಾಗಿದೆ. ಪರಿಣಾಮ, ಮಲ್ಲಿಗೆ ಕೃಷಿಯನ್ನೇ ನಂಬಿದ್ದ ಶಿರ್ವ, ಶಂಕರಪುರ, ಕಟಪಾಡಿ, ಬೆಳ್ಮಣ್ ಮುಂತಾದ ಕಡೆಯ ನೂರಾರು ಮಲ್ಲಿಗೆ ಕೃಷಿಕರು ಕಂಗಾಲಾಗಿದ್ದಾರೆ. ಕರೊನಾ ಮುಷ್ಟಿ ಸಡಿಲಗೊಂಡ ಬಳಿಕ ಶುಭ ಸಮಾರಂಭಗಳು ಚುರುಕು ಪಡೆದಿರುವ ಈ ಹೊತ್ತಿನಲ್ಲಿ ಅಕಾಲಿಕ ಮಳೆಯ ಕಾಟದಿಂದ ಇದ್ದ ಬೆಳೆಯೂ ನಷ್ಟವಾಗುತ್ತಿದೆ. ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಇಲಾಖೆಗೆ ಬೆಳೆಗಾರರು ಮನವಿ ಮಾಡಿದ್ದಾರೆ. ‘ಲಾಕ್‌ಡೌನ್ ಹೊಡೆತದ ಬಳಿಕ ಮಳೆಯ ಪ್ರಹಾರದಿಂದಾಗಿ ಮಲ್ಲಿಗೆ ಹೂವಿನ ಇಳುವರಿಯಿಲ್ಲದೆ ಜೀವನೋಪಾಯಕ್ಕೆ ತೊಂದರೆಯಾಗಿದೆ’ ಎಂದು ಮಲ್ಲಿಗೆ ಕೃಷಿಕ ರೋನಿ ಫರ್ನಾಂಡಿಸ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿವರ್ಷ ಮಟ್ಟುಗುಳ್ಳ ಬೆಳೆಗೆ ಪ್ರಾಕೃತಿಕ ವಿಕೋಪದಿಂದಾಗಿ ಹಾನಿ ಉಂಟಾಗುತ್ತಿದೆ. ಪ್ರತಿವರ್ಷ ಸರ್ಕಾರದಿಂದ ಪರಿಹಾರ ನಿರೀಕ್ಷೆ ಮಾಡುತ್ತಲೇ ಸೊರಗಿ ಹೋಗಿದ್ದೇವೆ. ಈ ಬಾರಿಯಂತೂ ಮಟ್ಟುಗುಳ್ಳ ಬೆಳೆಗಾರರು ಆರ್ಥಿಕವಾಗಿ ಕಂಗೆಟ್ಟಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.- ಲಕ್ಷ್ಮಣ್ ಮಟ್ಟು, ಪ್ರಧಾನ ಕಾರ್ಯದರ್ಶಿ, ಮಟ್ಟುಗುಳ್ಳ ಬೆಳೆಗಾರರ ಸಂಘ