ಶಿರೋಳ ಜಾತ್ರೆಯಲ್ಲಿ ಭಕ್ತರ ರೊಟ್ಟಿಯೂಟ

01 NRD-4
Published on

ನರಗುಂದ/ಶಿರೋಳ: ವಿಶ್ವಗುರು ಬಸವಣ್ಣನವರ ಕಾಯಕ ತತ್ವವು ವಿಶ್ವಮಾನ್ಯವಾಗಿದೆ. ಸತ್ಯ ಶುದ್ಧ ಕಾಯಕ ದಾಸೋಹದಿಂದ ಬದುಕಿಗೆ ಹೊಸ ಪರಿಕಲ್ಪನೆ ತಂದುಕೊಟ್ಟಿದ್ದಾರೆ. ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಶಿರೋಳ ತೋಂಟದಾರ್ಯ ಶಾಖಾಮಠದ ನಮ್ಮೂರ ರೊಟ್ಟಿ ಜಾತ್ರೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರು ನವ ಧರ್ಮದ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದರು. ಸಮಾಜದ ವರ್ಣ, ವರ್ಗ, ಜಾತಿ, ಧರ್ಮ ಹಾಗೂ ಲಿಂಗ ಆಧಾರದ ಸಮಾಜದ ಶ್ರೇಣಿಕೃತ ವ್ಯವಸ್ಥೆಯನ್ನು ತೊರೆದು ಹಾಕಿದರು. ದೀನದಲಿತರು, ಬಡವರು, ಶೋಷಿತರ, ಮಹಿಳೆಯರು ಸೇರಿ ಕೆಳಹಂತದಲ್ಲಿರುವ ಎಲ್ಲ ಜನಾಂಗದವರ ಉಸಿರುಗಟ್ಟಿಸುವ ಜಡ ವ್ಯವಸ್ಥೆಯಲ್ಲಿ ಬದುಕುವಂತೆ ಮಾಡಿದ ವೈದಿಕ ಆಚರಣೆಗಳನ್ನು ಮೆಟ್ಟಿನಿಂತು ಸಾಮಾಜಿಕ ಕ್ರಾಂತಿಗೆ ದಾರಿದೀಪವಾದರು. ಅವರ ಪರಿಕಲ್ಪನೆಯಂತೆ ಪ್ರತಿವರ್ಷ ರೊಟ್ಟಿ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
25 ಸಾವಿರಕ್ಕೂ ಅಧಿಕ ಭಕ್ತರಿಗೆ 8 ಲಕ್ಷ ರೊಟ್ಟಿ, 1 ಕ್ವಿಂಟಾಲ್ ಪಲ್ಯೆ, 4 ಕ್ವಿಂಟಲ್ ಬಾನ, 5 ಬ್ಯಾರಲ್ ಕರಿಂಡಿ ಉಣಬಡಿಸಲಾಯಿತು. ಶಾಂತಲಿಂಗ ಮಹಾಸ್ವಾಮೀಜಿ, ಸಿಂಧನೂರಿನ ಸಿದ್ಧಲಿಂಗ ಶಿವಾಚಾರ್ಯರು, ಹೈದರಾಬಾದ್‌ನ ಸಿಂಹಾಸನರೂಢ ಮಹಾಸ್ವಾಮೀಜಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಬಸವರಾಜ ಸಾಲಿಮಠ, ಶಂಕರ ಕುಪ್ಪಸ್ತ, ಲಾಲಸಾಬ್ ಅರಗಂಜಿ, ಕೆ.ಎಸ್. ಅಂಕ್ಲಿಮಠ, ಡಾ.ಎಂ.ನಿರಂಜನಮೂರ್ತಿ, ಲಿಂಗಬಸಯ್ಯ ಮಠದ, ಉಮೇಶ ಮರಿಗುದ್ದಿ, ಪ್ರಕಾಶಗೌಡ ತಿರಕನಗೌಡ್ರ,ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net