ಕೊಳೆಯುತ್ತಿರುವ ತರಕಾರಿ ಬೆಳೆಗಳು

Oplus_16908288
Oplus_16908288
Published on

ವಿರಾಜಪೇಟೆ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಬೃಹತ್ ಮರಗಳು ಧರೆಗುರುಳಿ ರಸ್ತೆ ಸಂಚಾರವನ್ನು ಕಡಿತಗೊಂಡಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಂಪರ್ಕ ಕಡಿತಗೊಂಡು ಜನರು ಕತ್ತಲೆಯಲ್ಲಿ ದಿನದ ಕಳೆಯುವಂತಾಗಿದೆ.

ನಿರಂತರ ಮಳೆಯಿಂದ ತರಕಾರಿ ಬೆಳೆಗಾರರು ಕಂಗಾಲಾಗಿದ್ದಾರೆ. ವಿರಾಜಪೇಟೆ ತಾಲೂಕಿನ ರೈತರು ತರಕಾರಿ ಬೆಳೆದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕರು ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಭತ್ತದ ಕಟಾವು ಪೂರ್ಣಗೊಂಡ ನಂತರ ತರಕಾರಿ ಬೆಳೆಯಲು ಗದ್ದೆಗಳನ್ನು ಸಿದ್ಧಪಡಿಸುತ್ತಾರೆ. ಜನವರಿಯಿಂದ ಜೂನ್‌ನವರಿಗೆ ತರಕಾರಿ ಬೆಳೆಯುತ್ತಾರೆ. ಆದರೆ ಈಗ ಮೇನಲ್ಲೇ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮವಾಗಿ ಬೆಳೆಗಳು ಕೊಳೆಯುತ್ತಿವೆ. ಬೀನ್ಸ್, ಅಲಸಂದೆ ಸೇರಿದಂತೆ ಇತರ ಬೆಳೆಗಳು ಹಾನಿಯಾಗುತ್ತಿವೆ. ಇದರಿಂದಾಗಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಮಳೆ ತಣ್ಣೀರನ್ನು ಎರಚಿದೆ.

ಈ ಭಾಗದ ರೈತರು ತರಕಾರಿ ಬೆಳೆಯುವುದು ಅಷ್ಟೇ ಅಲ್ಲ, ಮುಂದಿನ ವರ್ಷಕ್ಕೆ ಬೇಕಾದಂತಹ ಬಿತ್ತನೆ ಬೀಜಗಳನ್ನು ಸಹ ಸಂರಕ್ಷಿಸುವ ಕೆಲಸ ಮಾಡುತ್ತಾರೆ. ಅದರಂತೆ ಈ ವರ್ಷವೂ ಗಿಡದಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಿ ಹಣ್ಣಾಗಲೆಂದು ಬಿಟ್ಟಿದ್ದಂತಹ ವಿವಿಧ ತರಕಾರಿ ನಿರಂತರವಾಗಿ ಸುರಿದ ಮಳೆಯಿಂದ ತೊಟ್ಟಿನಿಂದ ಬೇರ್ಪಟ್ಟು ಕೆಳಗೆ ಬಿದ್ದು ಕೊಳೆಯುತ್ತಿವೆ. ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಪರಿಣಾಮವಾಗಿ ಬೆಳವಣಿಗೆಗೆಂದು ಗಿಡ, ಬಳ್ಳಿಗಳಲ್ಲಿ ಇದ್ದ ತರಕಾರಿಗಳು ಉದುರಿ ಕೊಚ್ಚಿಕೊಂಡು ಹೋಗಿ ನದಿ ಸೇರುತ್ತಿವೆ. ಇದರಿಂದ ರೈತರಿಗೆ ಮುಂದಿನ ವರ್ಷ ಬಿತ್ತನೆಗೆ ಉತ್ತಮ ಬೀಜಗಳು ದೊರಕದ ಸ್ಥಿತಿ ಎದುರಾಗಿದೆ.

ಉತ್ತಮ ಬೆಳೆ ನಿರೀಕ್ಷೆ ಹುಸಿ: ರೈತರು ಇನ್ನು ಒಂದು ತಿಂಗಳಲ್ಲಿ ಉತ್ತಮ ಬೆಳೆ ದೊರಕುವ ನಿರೀಕ್ಷೆಯಲ್ಲಿದ್ದರು. ಅದಕ್ಕೆ ಪೂರಕ ಎಂಬಂತೆ ಮೇ ತಿಂಗಳಿನ ಆರಂಭದಿಂದ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಇದರಿಂದ ಗಿಡ, ಬಳ್ಳಿಗಳು ಹೊಸ ಚಿಗುರುಗಳನ್ನು ಪಡೆದು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವು ಜೂನ್ ಮೊದಲ ಮೂರು ವಾರಗಳವರೆಗೆ ಫಸಲು ಪಡೆದು ಮುಂದಿನ ವರ್ಷಕ್ಕೆ ಬೇಕಾದ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ನಂತರ ಗಿಡಗಳನ್ನು ತೆರವುಗೊಳಿಸುವ ಯೋಜನೆ ಇತ್ತು. ಅದರಿದೀಗ ಮಳೆ ಎಲ್ಲವನ್ನೂ ನಾಶ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net