

ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಬುಧವಾರ ನಾಗರ ಪಂಚಮಿ ನಿಮಿತ್ತ ಮೊದಲ ದಿನ ರೊಟ್ಟಿ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಾಲು ಸಾಲು ಹಬ್ಬಗಳ ಹೆಬ್ಬಾಗಿಲು ಶ್ರಾವಣ ಮಾಸದ ಪ್ರಥಮ ವಾರದಲ್ಲಿಯೇ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. ನಾಗರ ಪಂಚಮಿ ಮುನ್ನಾ ದಿನ ಬುಧವಾರ ಪ್ರತಿಯೊಬ್ಬರ ಮನೆಯಲ್ಲಿ ರೊಟ್ಟಿ ಪಂಚಮಿ ಆಚರಿಸಲಾಯಿತು. ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮ್ಲಲಾಪೂರ, ದ್ಯಾಂಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ಹೊಸಳ್ಳಿ, ಅಬ್ಬಿಗೇರಿ, ಯರೇಬೇಲೇರಿ, ಗುಜಮಾಗಡಿ, ಡ.ಸ ಹಡಗಲಿ ಸೇರಿದಂತೆ ಹೋಬಳಿಯಾದ್ಯಂತ ರೊಟ್ಟಿ ಪಂಚಮಿ ಕಳೆಗಟ್ಟಿತ್ತು.
ಜನರು ತಮ್ಮ ಮನೆಗಳಲ್ಲಿ ನಾನಾ ಬಗೆಯ ಎಳ್ಳು ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಯ, ಕಡಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಮಡಕೆ ಕಾಳು ಪಲ್ಯ, ಹಿಟ್ಟಿನ ಪಲ್ಯ, ಕೋಸಂಬರಿ, ಮೆಂತೆ ಸೊಪ್ಪು, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ ಪುಟಾಣಿ ಚಟ್ನಿ, ಗುರೆಳ್ ಚಟ್ನಿ, ಜುಣಕಾ, ಅಗಿಸಿ ಚಟ್ನಿ, ಕರಿಂಡಿ, ಕೆಂಪು ಚಟ್ನಿ, ಹಸೆಕಾಯಿ ಚಟ್ನಿ, ಕರೆ ಬುತ್ತಿ, ಬಿಳಿ ಬುತ್ತಿ, ಮೊಸರು ಬುತ್ತಿ, ಚಿತ್ರನ್ನ ಸೇರಿದಂತೆ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಿ ಪೂಜಿಸಿ, ನಂತರ ಮನೆ ಮಂದಿ ಸೇರಿದಂತೆ ಅಕ್ಕಪಕ್ಕದವರ ಮನೆಯವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡು, ಬಂಧು-ಬಳಗದವರೊಂದಿಗೆ ಸಹಭೋಜನ ಮಾಡಿ ಸಂಭ್ರಮಿಸಿದರು.
ಬಾಂಧವ್ಯದ ಪ್ರತೀಕ: ಸಾಮಾನ್ಯವಾಗಿ ಉತ್ತರ ಕರ್ನಾಟದ ಗ್ರಾಮೀಣ ಪ್ರದೇಶದಲ್ಲಿ ರೊಟ್ಟಿ ಬಡಿಯದ ದಿನವೇ ಇಲ್ಲ. ಆದರೆ, ನಾಗರ ಅಮಾವಾಸ್ಯೆಯಿಂದ ಪಂಚಮಿ ಮುಗಿಯುವವರೆಗೂ ಮನೆಯಲ್ಲಿ ರೊಟ್ಟಿ ಬಡಿಯುವಂತಿಲ್ಲ ಎಂಬ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಆದ್ದರಿಂದ ಪಂಚಮಿ ಮುನ್ನಾ ದಿನಗಳಲ್ಲಿ ಎಲ್ಲರೂ ಹಲವು ರೀತಿಯಲ್ಲಿ ರೊಟ್ಟಿಗಳನ್ನು ಮಾಡಿ ತಮ್ಮ ಸುತ್ತಲಿನ ಮನೆಯವರೊಂದಿಗೆ ಹಂಚಿಕೊಳ್ಳುವ ವಿಶೇಷ ಹಬ್ಬವೇ ರೊಟ್ಟಿ ಪಂಚಮಿಯಾಗಿದೆ.
ಗಜೇಂದ್ರಗಡ: ತಾಲೂಕಿನ ಗೋಗೇರಿ, ಸೂಡಿ, ರಾಜೂರು, ಚಿಲಝರಿ, ರಾಂಪೂರ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
ಸಜ್ಜಿರೊಟ್ಟಿ, ಜೋಳದ ರೊಟ್ಟಿ, ಎಳ್ಳು ರೊಟ್ಟ್ಟಿ, ಮಡಿಕೆ ಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಹಿಟ್ಟಿನ ಪಲ್ಯ, ಕಡಲೆಕಾಳು ಪಲ್ಯ, ಕೋಸಂಬರಿ, ಮೆಂತೆ ಸೊಪ್ಪು, ಎಳ್ಳು ಉಂಡಿ, ಕಡಲೆ, ಶೇಂಗಾ ಚಟ್ನಿ, ಗುರೆಳ್ಳು, ಅಗಸಿಚಟ್ನಿ, ಶೇಂಗಾ ಉಂಡಿ, ಎಳ್ಳು ಉಂಡಿ, ಬೇಸನ್ ಉಂಡಿ, ಕೊಬ್ಬರಿ ಉಂಡಿ, ಚಕ್ಕಲಿ, ಶಂಕರಪಾಳಿ, ಖಾರದ ಗುಳಿಗೆ ಸೇರಿದಂತೆ ತಹರೇವಾರಿ ಖಾದ್ಯಗಳನ್ನು ತಯಾರಿಸಿ, ಗೃಹಣಿಯರು ಸಂಭ್ರಮದಿಂದ ಅಕ್ಕಪಕ್ಕದ ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿ ಹಂಚಿ ಸಂಭ್ರಮಿಸಿದರು.
‘ಪಂಚಮಿ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರೊಟ್ಟಿ ಹಬ್ಬಕ್ಕೆ ಬೇಕಾದ ವಿವಿಧ ಬಗೆಯ ರೊಟ್ಟಿಗಳನ್ನು ವಾರದ ಮುಂಚೆಯೇ ಮಾಡುತ್ತೇವೆ. ರೊಟ್ಟಿ ಹಬ್ಬದಂದು ಒಂದಿಷ್ಟು ಬಿಸಿರೊಟ್ಟಿಗಳನ್ನು ಸಹ ಮಾಡಿಕೊಳ್ಳುತ್ತೇವೆ. ಅದರೊಂದಿಗೆ ಬಗೆ ಬಗೆಯ ಪಲ್ಯ, ಚಟ್ನಿ, ಸೊಪ್ಪಿನ ಪಚಡಿ ಮಾಡಿ ಅದನ್ನು ದೇವರಿಗೆ ನೈವೇದ್ಯ ಮಾಡಿ ನೆರೆಹೊರೆಯವರಿಗೆ ಹಂಚುತ್ತೇವೆ. ನೆರೆಹೊರೆಯವರು ನಮಗೂ ರೊಟ್ಟಿಗಳನ್ನು ತಂದುಕೊಡುತ್ತಾರೆ. ಇದು ಒಂದು ರೀತಿಯ ಭಾವೈಕ್ಯ ಬಿಂಬಿಸುತ್ತದೆ. ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಹಬ್ಬವಾಗಿರುವ ನಾಗರ ಪಂಚಮಿಯಲ್ಲಿ ರೊಟ್ಟಿ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ’ ಎನ್ನುತ್ತಾರೆ ಕಟ್ಟಿಬಸವೇಶ್ವರ ನಗರದ ನಿವಾಸಿಗಳಾಗಿರುವ ಪೂಜಾ ಗೌರಿಮಠ, ಜಯಶ್ರೀ ಚಿಕ್ಕಮಠ, ನವ್ಯಾ ಚವಡಿ, ನಿರ್ಮಲಾ ಕಲಕೇರಿಮಠ.