ಕೆಟ್ಟುನಿಂತ ಕೊಳೆತ ಮೀನು ಸಾಗಾಟದ ಕಂಟೈನರ್ : ಸ್ಥಳೀಯರ ಆಕ್ರೋಶ

New Project (8)
Published on

ಉಳ್ಳಾಲ: ಕೋಟೆಪುರದ ಫಿಶ್‌ಮೀಲ್ ಫ್ಯಾಕ್ಟರಿಗಳಿಗೆ ಕೊಳೆತ ಮೀನು ಸಾಗಿಸುವ ಕಂಟೇನರ್‌ಗಳು ಓವರ್‌ಲೋಡ್‌ನಿಂದ ಕೆಟ್ಟು ನಿಂತು ಪರಿಸರದಲ್ಲಿ ದುರ್ವಾಸನೆಗೆ ಕಾರಣವಾಗಿದ್ದು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೋಟೆಪುರ ಫಿಶ್‌ಮೀಲ್‌ಗಳಿಗೆ ಕೊಳೆತ ಮೀನುಗಳನ್ನು ಸಾಗಿಸುವ ಕಂಟೇನರ್‌ಗಳು ಮೂರು ದಿನಗಳಿಂದ ಕೆಟ್ಟು ನಿಂತು ಪರಿಸರದಲ್ಲಿ ದುರ್ವಾಸನೆಗೆ ಕಾರಣವಾಗಿವೆ. ಅಲ್ಲದೆ ಶನಿವಾರ ರಾತ್ರಿ ತ್ಯಾಜ್ಯ ನೀರನ್ನು ರಸ್ತೆಗೆ ಹರಿಯಬಿಟ್ಟ ಪರಿಣಾಮ ಪರಿಸರದಲ್ಲಿ ದುರ್ವಾಸನೆ ತುಂಬಿದ್ದು ಇದರಿಂದ ಆಕ್ರೋಶಿತರಾದ ಸ್ಥಳೀಯರು ಈ ರಸ್ತೆಯಾಗಿ ತೆರಳುತ್ತಿದ್ದ ಕಂಟೇನರ್‌ಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಸುಮಾರು ಎರಡು ತಾಸು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಭಾನುವಾರ ಸಂಜೆಯೂ ಉಳ್ಳಾಲದ ರಸ್ತೆಯಲ್ಲಿ ಫ್ಯಾಕ್ಟರಿಗೆ ಸಾಗುತ್ತಿದ್ದ ಲಾರಿ ಕೆಟ್ಟು ನಿಂತು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ರಾತ್ರಿವರೆಗೂ ಸಂಕಷ್ಟ ಅನುಭವಿಸಿದ್ದರು. ಸೋಮವಾರ ಮಧ್ಯಾಹ್ನವೂ ಮೀನಿನ ತ್ಯಾಜ್ಯ ಸಾಗಿಸುತ್ತಿದ್ದ ಲಾರಿ ಕೆಟ್ಟು ನಿಂತು ಮತ್ತೆ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೋಟೆಪುರ ಭಾಗದಲ್ಲಿರುವ ಫಿಶ್‌ಮೀಲ್‌ಗಳಿಗೆ ಪ್ರತಿದಿನ ಇನ್ನೂರಕ್ಕೂ ಅಧಿಕ ಲಾರಿಗಳು ಬರುತ್ತಿದ್ದು, ಇಲ್ಲಿನ ಫಿಶ್‌ಮೀಲ್‌ಗಳೂ ನಿಯಮ ಗಾಳಿಗೆ ತೂರಿ ಕಾರ್ಯಾಚರಿಸುತ್ತಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಬರುತ್ತಿದೆ. ಅಲ್ಲದೆ ಜನನಿಬಿಢ ಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳಲ್ಲಿ ಬಳಸಲಾಗುತ್ತಿರುವ ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಹಾರೋ ಬೂದಿಯಿಂದ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ರಾಸಾಯನಿಕ ತ್ಯಾಜ್ಯ ಸಮುದ್ರ ಸೇರುತ್ತಿರುವುದರಿಂದ ಜಲಚರಗಳು ನಶಿಸುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲದ ಜನತೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net