

ಮೈಸೂರು: ಕುಕ್ಕರಹಳ್ಳಿ ಕೆರೆಗೆ ನಿರಂತರವಾಗಿ ಕಲುಷಿತ ನೀರು ಸೇರ್ಪಡೆಯಾಗುತ್ತಿದ್ದು, ಕಲುಷಿತ ನೀರು ತಡೆಗೆ ತುರ್ತು ಕ್ರಮ ವಹಿಸಬೇಕು ಎಂದು ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಆಗ್ರಹಿಸಿದರು.
ನಗರದ ಮೈಸೂರು ವಿಶ್ವವಿದ್ಯಾಲಯ ಬಡಾವಣೆಯ ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಶನಿವಾರ ಇಂಟೆಕ್ ಸಂಸ್ಥೆಯಿಂದ ‘ಕುಕ್ಕರಹಳ್ಳಿ ಕೆರೆ ಸಂರಕ್ಷಣೆ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಮಾನಸಗಂಗೋತ್ರಿಯ ಮಹಿಳಾ ವಿದ್ಯಾರ್ಥಿ ನಿಲಯದ ಯುಜಿಡಿ ನೀರು ನೇರವಾಗಿ ಕುಕ್ಕರಹಳ್ಳಿ ಕೆರೆಗೆ ಸೇರ್ಪಡೆಯಾಗುತ್ತಿದ್ದು, ಇದರಿಂದ ಕೆರೆ ನೀರು ಕಲುಷಿತ ಗೊಳ್ಳುತ್ತಿದೆ. ಕಲುಷಿತ ನೀರು ಸೇರ್ಪಡೆ ತಡೆಯುವ ಮೂಲಕ ಕೆರೆಯ ಆರೋಗ್ಯ ಕಾಪಾಡಬೇಕು ಎಂದರು.
ಕುಡಿಯುವ ನೀರಿನ ಉದ್ದೇಶಕೋಸ್ಕರ 10ನೇ ಚಾಮರಾಜ ಒಡೆಯರ್ 1881-82ರಲ್ಲಿ ಕುಕ್ಕರಹಳ್ಳಿ ಕೆರೆ ನಿರ್ಮಾಣ ಮಾಡಿದರು. ಮೈಸೂರು ಕಾರಾಗೃಹದ ಕೈದಿಗಳನ್ನು ಬಳಕೆ ಮಾಡಿಕೊಂಡು ಈ ಕೆರೆಯನ್ನು ನಿರ್ಮಿಸಲಾಯಿತು. ಕೆರೆಯ ಮಧ್ಯ ಭಾಗದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ತೆರೆದ ಬಾವಿ ಇಂದಿಗೂ ಇದೆ. ಕೆರೆಯಲ್ಲಿ ನೀರು ಸಂಪೂರ್ಣ ಬರಿದಾದರೆ ಈ ಬಾವಿಯನ್ನು ಕಾಣಬಹುದು. ಕೆರೆಯ ನೀರನ್ನು ಈ ಹಿಂದೆ ಕುಕ್ಕರಹಳ್ಳಿ, ಸರಸ್ವತಿಪುರಂ, ಬೋಗಾದಿ, ಪಡುವಾರಹಳ್ಳಿ ಸೇರಿದಂತೆ ವಿವಿಧ ಗ್ರಾಮ ಹಾಗೂ ಬಡಾವಣೆಯ ನಿವಾಸಿಗಳು ಬಳಕೆ ಮಾಡುತ್ತಿದ್ದರು. ಕೆರೆಯ ನೀರು ಈ ಹಿಂದೆ ಅಷ್ಟೊಂದು ಪರಿಶುದ್ಧವಾಗಿತ್ತು. ಆದರೆ, ನಗರೀಕರಣದ ಪರಿಣಾಮ ಕೆರೆಗೆ ಕಲುಷಿತ ನೀರು ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಲವು ದಶಕಗಳ ಹಿಂದೆ ಕುಕ್ಕರಹಳ್ಳಿ ಕೆರೆಯ ಏರಿ ಈಗಿನಂತೆ ದೊಡ್ಡದಾಗಿ ಇರಲಿಲ್ಲ. ನಂತರ ಕೆರೆಯ ಏರಿಯನ್ನು ವಿಸ್ತರಿಸಿ ಗಿಡ, ಮರಗಳನ್ನು ಬೆಳೆಸಲಾಯಿತು. ಪ್ರಸ್ತುತ ಕುಕ್ಕರಹಳ್ಳಿ ಕೆರೆಯಲ್ಲಿ ನೂರಾರು ಮರಗಳು ಇದ್ದು, ಮರಗಳ ಬೇರುಗಳು ಆಳವಾಗಿ ಬೇರುಬಿಟ್ಟು ಕೆರೆಯ ಏರಿಗೆ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆರೆಯಲ್ಲಿ ಸುಂದರವಾದ ಗೋಪುರ ಹಾಗೂ ಕಬ್ಬಿಣದ ಸೇತುವೆ ಇದ್ದು, ಇದು ನಿರ್ವಹಣೆ ಇಲ್ಲದೆ ಸೊರಗಿದೆ. ಇದರ ಸಂರಕ್ಷಣಾ ಕಾರ್ಯ ನಡೆಯಬೇಕಾಗಿದೆ. ಕೆರೆಯನ್ನು ಉಳಿಸುವ ಜವಾಬ್ದಾರಿಯನ್ನು ಮೈಸೂರಿನ ನಾಗರಿಕರು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಲತಜ್ಞ ಯು.ಎನ್. ರವಿಕುಮಾರ್ ಮಾತನಾಡಿ, ಕುಡಿಯುವ ನೀರಿನ ಉದ್ದೇಶಕ್ಕೆ ನಿರ್ಮಾಣವಾದ ಕುಕ್ಕರಹಳ್ಳಿ ಕೆರೆಯು ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ನಗರೀಕರಣಗೊಂಡಂತೆ ಕೆರೆಯ ನೀರಿನ ಕಲುಷಿತ ಪ್ರಮಾಣದಲ್ಲೂ ಏರಿಕೆ ಕಾಣಲು ಪ್ರಾರಂಭವಾಯಿತು ಎಂದರು.
ಕೆರೆಗೆ ಹಲವು ದಶಕಗಳ ಹಿಂದೆ ನಗರದ ಸುತ್ತಮುತ್ತ ಇರುವ ಕೆರೆಗಳಿಂದ ಶುದ್ಧವಾದ ನೀರು ಹರಿದು ಬರುತಿತ್ತು. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದ ನಂತರ ನಗರೀಕರಣದಿಂದ ಕೆರೆಗೆ ಕಲುಷಿತ ನೀರು ಹರಿದು ಬರಲು ಪ್ರಾರಂಭವಾಯಿತು. ಇದರ ಜತೆಗೆ ಕೆರೆಗೆ ನೀರು ಪೂರೈಸುವ ನಾಲೆ ಒತ್ತುವರಿಗೆ ಒಳಗಾಗಿದೆ ಎಂದು ಹೇಳಿದರು.
ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಯದುಪತಿ ಪುಟ್ಟಿ ಮಾತನಾಡಿ, ಕೆರೆಯಲ್ಲಿ ತುಂಬಿರುವ ಹೂಳು ಹಾಗೂ ಹಯಸಿಂತ್‌ಅನ್ನು ತೆರವುಗೊಳಿಸುವ ಮೂಲಕ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ನಗರದಲ್ಲಿ ವಾರ್ಷಿಕ ಸರಾಸರಿ 80 ಸೆಂಟಿಮೀಟರ್‌ನಷ್ಟು ಮಳೆ ಸುರಿಯುತ್ತದೆ. ಈ ಮಳೆ ನೀರು ಕೆರೆಗೆ ಹರಿದು ಬರುವಂತೆ ಮಾಡಬೇಕು. ಕೆರೆಯಲ್ಲಿರುವ ಕಲ್ಮಷವನ್ನು ಹೊರ ಹಾಕಲು ಮಳೆಗಾಲದಲ್ಲಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಅವಶ್ಯಕತೆ ಇದೆ. ಈ ರೀತಿಯ ಕ್ರಮದಿಂದ ಕೆರೆಯು ಶುದ್ಧಗೊಳ್ಳುತ್ತದೆ ಎಂದರು.
ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಕೆ ಮಾಡುವ ಪೂರ್ಣಯ್ಯ ನಾಲೆ ಅಭಿವೃದ್ಧಿ ಕುರಿತು 2018ರಲ್ಲಿ ಪ್ರಾಥಮಿಕ ವರದಿ ಸಿದ್ಧಪಡಿಸಿ ಜಿಲ್ಲಾ ಡಳಿತಕ್ಕೆ ಸಲ್ಲಿಸಲಾಗಿತ್ತು. ಆದರೆ, ನಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಕೆರೆ ಜಯರಾಮಯ್ಯ, ಪರಿಸರವಾದಿಗಳಾದ ತನುಜಾ ಹಂಸಭಾವಿ, ಮನು ಹಾಗೂ ಇತರರು ಇದ್ದರು.