

ಮಡಿಕೇರಿ:
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲಾ ವಿಭಾಗದಲ್ಲಿ ರೋಟರಿ ಇಂಟರ‌್ಯಾಕ್ಟ್ ಕ್ಲಬ್ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ಇಂಟರ‌್ಯಾಕ್ಟ್ ಸಮಿತಿ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಪದಗ್ರಹಣಾಧಿಕಾರಿಯಾಗಿ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿ ರೋಟರಿಯ ವಿದ್ಯಾರ್ಥಿ ಘಟಕಗಳು ಸಹಕಾರಿ ಎಂದು ಸೋನಾಜಿತ್ ಈ ವೇಳೆ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ೧೨ ವರ್ಷಗಳ ಹಿಂದೆ ಇಂಟರ‌್ಯಾಕ್ಟ್ ಘಟಕ ಪ್ರಾರಂಭಿಸಿದ್ದು ಅತ್ಯಂತ ಸಕ್ರಿಯವಾಗಿ ವಿದ್ಯಾರ್ಥಿಗಳು ಕಾರ್ಯಯೋಜನೆ ಕೈಗೊಳ್ಳುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಬದ್ಧತೆಯನ್ನು ಈ ವಿದ್ಯಾರ್ಥಿಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ರತ್ನಾಕರ್ ರೈ, ಜಗದೀಶ್, ಅಜಿತ್ ನಾಣಯ್ಯ, ಕಾರ್ಯಪ್ಪ, ಉಪ ಪ್ರಾಂಶುಪಾಲ ಶಿವಣ್ಣ ಭಾಗವಹಿಸಿದ್ದರು.
ಇಂಟರ‌್ಯಾಕ್ಟ್ ಕ್ಲಬ್ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣಳಾದ ಫಾತಿಮತ್ ಶೈಮ ಮತ್ತು ವರ್ಗಾವಣೆಗೊಂಡ ಶಿಕ್ಷಕಿ ಅಶ್ವಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಶೈಮಾಳಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.
ನೂತನ ಸಮಿತಿಗೆ ವಿದ್ಯಾರ್ಥಿಗಳಾದ ಮೊಹಮ್ಮದ್ ಆಸ್ಕರ್ ಅಧ್ಯಕ್ಷನಾಗಿ, ಮುನೀರ ಕಾರ್ಯದರ್ಶಿಯಾಗಿ ಆಯ್ಕೆ ಆದರು. ಘಟಕದ ಸಂಯೋಜಕಿ ಶಿಕ್ಷಕಿ ಉಷಾರಾಣಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.