

ಹುಬ್ಬಳ್ಳಿ: ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಹಾಗೂ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ನಿತ್ಯವೂ ಓದುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಹಳಷ್ಟು ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇಂತಹ ಮಾಹಿತಿಪೂರ್ಣ ಪತ್ರಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿಯೊಂದಿಗೆ ಇಲ್ಲಿಯ ದೇಶಪಾಂಡೆನಗರದ ರೋಟರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಮುದ್ರಣ ಘಟಕ ವೀಕ್ಷಣೆ ಮಾಡಿದರು.
ವರೂರಿನಲ್ಲಿರುವ ವಿಜಯವಾಣಿ ಪ್ರಿಂಟಿಂಗ್ ಪ್ರೆಸ್ ಗೆ ಭೇಟಿ ನೀಡಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡರು. ಮಕ್ಕಳಿಗೆ ಹಲವು ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅದರಲ್ಲೂ ತಾಂತ್ರಿಕ ಸಂಗತಿಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಇರುತ್ತದೆ. ಅತ್ಯಂತ ಉತ್ಸಾಹದಿಂದ ಮುದ್ರಣ ಘಟಕದ ಎಲ್ಲ ವಿಭಾಗಗಳಿಗೆ ತೆರಳಿ ಮಾಹಿತಿ ಪಡೆದರು.
ಪ್ರಿಂಟಿಂಗ್ ವಿಭಾಗದ ಆಧುನಿಕ ತಂತ್ರಜ್ಞಾನ, ಬಣ್ಣ, ನ್ಯೂಸ್ ಪ್ರಿಂಟ್, ಸುದ್ದಿ ವಿಭಾಗದಿಂದ ಬರುವ ಪುಟಗಳು ಮುಂತಾದ ಸಂಗತಿಗಳನ್ನು ಕಣ್ಣಾರೆ ಕಂಡು ಚಕಿತರಾದರು. ವಿಜಯವಾಣಿಯು ಹೇಗೆಲ್ಲ ಪ್ರಿಂಟ್ ಆಗುತ್ತದೆ, ಓದುಗರ ಮನೆಗೆ ಹೇಗೆ ತಲುಪುತ್ತದೆ, ಈ ಮಧ್ಯೆ ಇದಕ್ಕಾಗಿ ಸಿಬ್ಬಂದಿ ಎಷ್ಟು ಪರಿಶ್ರಮ ಪಡುತ್ತಾರೆ ಎಂಬೆಲ್ಲ ಸಂಗತಿಗಳನ್ನು ತಿಳಿದುಕೊಂಡರು.
ವಿಜಯವಾಣಿ ಮುದ್ರಣಾಯಲಕ್ಕೆ ಭೇಟಿ ನೀಡಿ ಬಹಳಷ್ಟು ಸಂತೋಷವಾಯಿತು. ಪತ್ರಿಕೆಯ ಮುದ್ರಣ ಹಾಗೂ ಅದರ ಸಮಗ್ರ ಮಾಹಿತಿ ತಿಳಿಯಿತು. ವಿಜಯವಾಣಿಯ ಎಲ್ಲ ಪುಟಗಳು ಕಲರ್ ಮುದ್ರಣಗೊಳ್ಳುವುದು ಕುತೂಹಲ ಮೂಡಿಸಿತು. ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ವಿಜಯವಾಣಿಯ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಿದ ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಶಿಕ್ಷಕಿ ಕವಿತಾ ದೇವಿಕೊಪ್ಪ ತಿಳಿಸಿದರು.