ಸಮಾಜಸೇವಾ ಕಾರ್ಯಗಳಿಗೆ ರೋಟರಿ ಸಂಸ್ಥೆ ಪ್ರೇರಣೆ ನೀಡುತ್ತದೆ: ಡಾ.ಕೇಶವ್

rotry padagrahana
Published on

ಮಡಿಕೇರಿ: ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಜಗದಗಲ ಖ್ಯಾತಿ ಗಳಿಸಿರುವ ರೋಟರಿ ಸಂಸ್ಥೆಯು ನಾಯಕತ್ವ ಗುಣ ಬೆಳೆಸಲು ನೆರವಾಗುವುದರೊಂದಿಗೆ ಸದಸ್ಯರಲ್ಲಿರುವ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಗಿ ಸಮಾಜ ಸೇವೆಗೆ ಪ್ರೇರಪಣೆ ನೀಡುತ್ತದೆ ಎಂದು ಸುಳ್ಯ ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಡಾ.ಪಿ.ಕೆ.ಕೇಶವ್ ಹೇಳಿದರು.


ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್‌ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾರ್ಯದರ್ಶಿಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಮಾತನಾಡಿದರು.


ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿ ಬಿಡುತ್ತಾನೆ. ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇರ್ಪಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಜೀವನದಲ್ಲಿ ಒಂದು ಹಂತದವರೆಗೆ ಸಂಪತ್ತು, ಕೀರ್ತಿ ಸಂಪಾದನೆ ಮಾಡಬೇಕು. ಆದರೆ, ದೊರಕಿದ ಮೇಲೆಯೂ ಸಮಾಧಾನ ದೊರಕದೇ ಹೋದಾಗ ಸಾಮಾಜಿಕ ಸೇವೆಗೆ ಮುಂದಾದರೆ ಮಾತ್ರ ಮಾನಸಿಕ ನೆಮ್ಮದಿ ದೊರಕುತ್ತದೆ. ರೋಟರಿಯ ಸೇವಾ ಕಾರ್ಯಗಳು ಈ ಸಂಸ್ಥೆಯ ಸದಸ್ಯರಿಗೆ ಬೇರೆಲ್ಲೂ ದೊರಕದ ಮಾನಸಿಕ ಸಂತೋಷ ಮತ್ತು ನೆಮ್ಮದಿ ದೊರಕಿಸಿಕೊಡುತ್ತದೆ ಎಂದು ಹೇಳಿದರು.


ರೋಟರಿ ವಲಯ ೬ರ ಸಹಾಯಕ ಗವರ್ನರ್ ದೇವಣಿರ ಕಿರಣ್ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ, ಸಂಚಾರ ಮತ್ತು ಮಾದಕ ವ್ಯಸನದ ಜಾಗ್ರತಿ ಬಗ್ಗೆ ಕಾರ್ಯಕ್ರಮ ಸೇರಿದಂತೆ ೯ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ರೋಟರಿ ಸಂಸ್ಥೆಗಳು ಮುಂದಾಗಿದೆ ಎಂದು ಹೇಳಿದರು.


ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ೩ ವರ್ಷಗಳ ಹಿಂದೆ ಪ್ರಾರಂಭಿಸಿದ ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾದ ರೋಟರಿ ವುಡ್ಸ್ ಸಮಾಜ ಸೇವೆಯಲ್ಲಿ ಸಾರ್ಥಕತೆಯೊಂದಿಗೆ ಜನರ ಮನಗೆದ್ದಿದೆ ಎಂದು ಶ್ಲಾಘಿಸಿದರು.


ರೋಟರಿ ವುಡ್ಸ್ ನೂತನ ಅಧ್ಯಕ್ಷ ಹರೀಶ್ ಕಿಗ್ಗಾಲು ಮಾತನಾಡಿ, ಈ ವರ್ಷದಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿಸುವುದಾಗಿ ಭರವಸೆ ನೀಡಿದರು.


ಇದೇ ಸಂದರ್ಭ ಜಾದೂಗಾರ ವಿಕ್ರಂಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಂದ ರೋಟರಿ ವುಡ್ಸ್‌ನ ವಾರ್ತಾ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು. ನಂತರ ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಅಡುಗೆ ಅನಿಲ ಸಿಲಿಂಡರ್ ವಿತರಕರಾದ ಮಂಜುನಾಥ್, ಸುರೇಶ್, ಇರ್ಫಾನ್, ಉನೈಜ್, ವಜೀರ್, ಪೀಟರ್, ಇಮ್ರಾನ್ ಅವರುಗಳನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ರೋಟರಿ ವುಡ್ಸ್ ನಿರ್ಗಮಿತ ಅಧ್ಯಕ್ಷ ವಸಂತ್ ಕುಮಾರ್, ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ಸೇರಿದಂತೆ ರೋಟರಿ ವಲಯ ೬ರ ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net