

ಸಕಲೇಶಪುರ: ಬದುಕಿನ ಶೈಲಿಯನ್ನು ಬದಲಾಯಿಸಿಕೊಳ್ಳಲು ರೋಟರಿ ಸಂಸ್ಥೆ ಸೇರ್ಪಡೆಯಾಗಿ ಎಂದು ಸಂಸ್ಥೆ ಹಿರಿಯ ಸದಸ್ಯ ಶೇಖರ್ ಹೇಳಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆಗೆ ಬದುಕು ಕಟ್ಟಿಕೊಳ್ಳಲು ಬರಬೇಡಿ, ಒತ್ತಡ, ಹತಾಶೆಯಿಂದ ಪಾರಾಗಲು ಸಂಸ್ಥೆಯನ್ನು ಸೇರಿ ಎಂದು ಸಲಹೆ ನೀಡಿದರು.
ಸೇವೆ ಮಾಡುವ ಉದ್ದೇಶಕ್ಕಾಗಿ ರೋಟರಿ ಸೇರುತ್ತೇವೆ ಎಂಬುದು ಸಾಮಾನ್ಯ ಜನರಲ್ಲಿ ಇರುವ ನಂಬಿಕೆ. ಸಮಾಜ ಸೇವೆಗೆ ರೋಟರಿ ಸಂಸ್ಥೆಯನ್ನೇ ಸೇರಬೇಕು ಎಂಬುದು ತಪ್ಪು. ಸೇವೆ ಮಾಡಲು ಹಲವು ವಿಧಾನಗಳಿವೆ. ಆದರೆ, ವ್ಯಕ್ತಿತ್ವ ವಿಕಸನ, ಸಂಸ್ಕಾರವಂತರ ಒಡನಾಟಕ್ಕಾಗಿ ರೋಟರಿ ಸೇರಬೇಕು. ನಗುವಿಗೆ ಪ್ರಪಂಚವನ್ನೇ ಗೆಲ್ಲುವ ಶಕ್ತಿಯಿದ್ದು ನಗುವ ಮೂಲಕ ವಾತಾವರಣವನ್ನು ಸಂತಸದಲ್ಲಿಡುವ ಕಲೆಯನ್ನು ರೋಟರಿ ಕಲಿಸುತ್ತದೆ. ಮನುಷ್ಯನ ಮನಸ್ಥಿತಿ ಬದಲಿಸುವ ಶಕ್ತಿ ಸಂಸ್ಥೆಗೆ ಇದೆ ಎಂದರು.
2023-24 ನೇ ಸಾಲಿನ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ವೀರೇಂದ್ರ, ಕಾರ್ಯದರ್ಶಿಯಾಗಿ ರವಿರಾಜ್‌ಶೆಟ್ಟಿ, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಖಜಾಂಚಿಯಾಗಿ ಶಶಿಧರ್ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಸದಾಶಿವ ಹಾಗೂ ಕಾರ್ಯದರ್ಶಿ ಅವಿನಾಶ್, ಯಶ್ವಂತ್ ಇತರರು ಇದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.