ರೋಟರಿ ಮಿಸ್ಟಿ ಹಿಲ್ಸ್ ಕಬಡ್ಡಿ ಚಾಂಪಿಯನ್ ಗರಿ

rotry
Published on

ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ರೋಟರಿ ಜಿಲ್ಲಾ ಮಟ್ಟದ ಪ್ರಥಮ ವರ್ಷದ ಕಬಡ್ಡಿ ಪಂದ್ಯಾಟದಲ್ಲಿ ಮಿಸ್ಟಿ ಹಿಲ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ನಗರದ ಗಾಂಧಿ ಮೈದಾನದಲ್ಲಿ ನಡೆದ ರೋಟರಿ ಜಿಲ್ಲೆ ೩೧೮೧ನ ರೋಟರಿ ಸದಸ್ಯರಿಗಾಗಿನ ಕಬಡ್ಡಿ ಪಂದ್ಯಾಟದಲ್ಲಿ ಮಿಸ್ಟಿ ಹಿಲ್ಸ್ ತಂಡದನಾಯಕ ಕಪಿಲ್ ನೇತೃತ್ವದಲ್ಲಿ ಪಿರಿಯಾಪಟ್ಟಣ ಮಿಡ್ ಟೌನ್ ತಂಡವನ್ನು ಮಣಿಸಿ ಕಬಡ್ಡಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ೨೫ ಸಾವಿರ ನಗದು ಮತ್ತು ಟ್ರೋಫಿಯನ್ನು ಮಿಸ್ಟಿ ಹಿಲ್ಸ್ ಪಡೆದುಕೊಂಡಿದೆ.

ಪಿರಿಯಾಪಟ್ಟಣ ಮಿಡ್ ಟೌನ್ ತಂಡ ದ್ವಿತೀಯ ಸ್ಥಾನದೊಂದಿಗೆ ೧೫ ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ಪಡೆದರೆ, ಸೆಂಟ್ರಲ್ ಪುತ್ತೂರು ತಂಡ ತೃತೀಯ ಮತ್ತು ಹುಣಸೂರು ರೋಟರಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮಡಿಕೇರಿ ರೋಟರಿ ವುಡ್ಸ್ ತಂಡ ಅತ್ಯಂತ ಶಿಸ್ತು ಬದ್ಧ ತಂಡ ಪ್ರಶಸ್ತಿ ಪಡೆಯಿತು.

ಆಲ್ ರೌಂಡರ್ ಆಟಗಾರ ಪ್ರಶಸ್ತಿಯನ್ನು ಪಿರಿಯಾಪಟ್ಟಣ ಮಿಡ್‌ನ ಸುನೀಲ್ ಪಡೆದುಕೊಂಡರೆ, ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಕುಲ್ಲೇಟಿರ ಅಜಿತ್ ನಾಣಯ್ಯ ತಮ್ಮದಾಗಿಸಿಕೊಂಡರು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಮಿಸ್ಟಿ ಹಿಲ್ಸ್ ತಂಡದ ನಾಯಕ ದುಗ್ಗಳ ಕಪಿಲ್ ಪಡೆದುಕೊಂಡರು.

ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ ಮತ್ತು ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ವಿತರಿಸಿದರು.

ಈ ಸಂದರ್ಭ ಮಾತನಾಡಿದ ವಿಕ್ರಂದತ್ತ, ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆಯಲ್ಲಿ ಆಯೋಜಿತ ಕಬಡ್ಡಿ ಪಂದ್ಯಾಟವನ್ನು ಮಿಸ್ಟಿ ಹಿಲ್ಸ್ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ. ಮುಂದಿನ ವರ್ಷ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಕಬಡ್ಡಿ ಪಂದ್ಯಾಟ ಆಯೋಜಿಸಲಾಗುತ್ತಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ೧೨೦ ವರ್ಷಗಳು ತುಂಬಿರುವ ಈ ಕಬಡ್ಡಿಯ ಮೂಲಕ ಮತ್ತಷ್ಟು ಸಂಭ್ರಮ ಲಭಿಸಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಹಾಜರಿದ್ದರು. ಎಸ್.ಎಂ.ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾಸಂಚಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕಬ್ಬಡಿ ಆಯೋಜನಾ ಸಮಿತಿ ಸಂಚಾಲಕ ಜಯಂತ್ ಪೂಜಾರಿ, ಸಹಸಂಚಾಲಕ ದುಗ್ಗಳ ಕಪಿಲ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ರೋಟರಿ ವಲಯ ೬ರ ವಿವಿಧ ರೋಟರಿ ಸಂಸ್ಥೆಗಳಿಂದ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net