ರೋಟರಿಯು ವಿಶ್ವದಲ್ಲಿಯೇ ಅತ್ಯಂತ ಕ್ರಿಯಾಶೀಲ ಸಂಸ್ಥೆ: ಸೋಮಶೇಖರ್

padagrahana
Published on

ಮಡಿಕೇರಿ: ಜಗತ್ತಿನಲ್ಲಿಯೇ ರೋಟರಿ ಸಂಸ್ಥೆಯು ಅತ್ಯಂತ ಕ್ರಿಯಾಶೀಲ ಸೇವಾ ಸಂಸ್ಥೆಯಾಗಿ ಖ್ಯಾತವಾಗಿದ್ದು, ರೋಟರಿಯ ಸಾಮಾಜಿಕ ಹೊಣೆಯನ್ನು ಅತ್ಯಂತ ಯಶಸ್ಸಿಯಾಗಿ ಮುಂದುವರೆಸುವ ಮಹತ್ವದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲಿದೆ ಎಂದು ಮೈಸೂರಿನ ಉದ್ಯಮಿ, ರೋಟರಿ ಪ್ರಮುಖ ಯಶಸ್ವಿ ಸೋಮಶೇಖರ್ ಕಿವಿಮಾತು ಹೇಳಿದರು.


ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್‌ನ ನೂತನ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿಯಾಗಿ ಕಟ್ಟೆಮನೆ ಸೋನಜಿತ್ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.


ಜಾಗತಿಕವಾಗಿ ೧೧೯ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆ ಪ್ರತೀ ವರ್ಷ ಕೋಟ್ಯಾಂತರ ಜನರಿಗೆ ಸೇವೆಯ ಮೂಲಕ ನೆರವು ನೀಡುತ್ತಲೇ ಬಂದಿದೆ. ರೋಟರಿ ಸದಸ್ಯರು ನೀಡುವ ದೇಣಿಗೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಸಂತ್ರಸ್ಥರಿಗೆ ತಲುಪುತ್ತಿದೆ ಎಂದರು.


ರೋಟರಿ ಸಂಸ್ಥೆಯು ಇಂದು ಸಾಮಾಜಿಕ ಜವಬ್ದಾರಿಯುಳ್ಳ, ಸಮಾಜಸೇವೆಯ ಕಳಕಳಿಯುಳ್ಳ ನಿಸ್ವಾರ್ಥ ಮನೋಭಾವದ ಸಮಾಜದ ಎಲ್ಲಾ ವರ್ಗಕ್ಕೆ ಸೇರಿರುವ ಸದಸ್ಯರನ್ನು ಹೆಚ್ಚಾಗಿ ಬಯಸುತ್ತಿದೆ ಎಂದ ಅವರು, ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷೆ ಮಹಿಳೆಯೇ ಅಗಿರುವುದರಿಂದ ಮಹಿಳಾ ಸದಸ್ಯರ ಸೇರ್ಪಡೆಗೂ ಗಮನ ನೀಡಿ ಎಂದು ಸಲಹೆ ನೀಡಿದರು.


ರೋಟರಿ ಮಿಸ್ಟಿ ಹಿಲ್ಸ್‌ನ ನೂತನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ೬೫ ಸದಸ್ಯ ಬಲದ ಮಿಸ್ಟಿ ಹಿಲ್ಸ್‌೧೯ ವರ್ಷಗಳಲ್ಲಿ ಸೇವಾಸಾಧನೆಗಾಗಿ ಖ್ಯಾತವಾಗಿದೆ. ಮತ್ತಷ್ಟು ನೂತನ ಯೋಜನೆಗಳ ಮೂಲಕ ಈ ಸೇವಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.


ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್ ಮತ್ತು ವಲಯ ಸೇನಾನಿ ಅನಿತಾ ಪೂವಯ್ಯ, ಈ ವರ್ಷದ ರೋಟರಿಯ ಸೇವಾ ಯೋಜನೆಗಳ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೋಟೋ ಮಿಸ್ಟ್ ವಾರ್ತಾಸಂಚಿಕೆ ಅತಿಥಿಗಳು ಬಿಡುಗಡೆಗೊಳಿಸಿದರು.


ಮಿಸ್ಟಿ ಹಿಲ್ಸ್‌ನ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ರೋಟರಿ ಜಿಲ್ಲೆ ೩೧೮೧ನ ಮಾಜಿ ಗವರ್ನರ್‌ಗಳಾದ ರವೀಂದ್ರಭಟ್, ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net