

ಸಕಲೇಶಪುರ: ರೋಟರಿ ಸಂಸ್ಥೆ ಸರ್ಕಾರಕ್ಕೆ ಪರ್ಯಾಯವಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದೆ ಎಂದು ರೋಟರಿ ಪ್ರಾಂತಪಾಲ ಪಾಲಾಕ್ಷ ಹೇಳಿದರು.
ತಾಲೂಕಿನಲ್ಲಿ ರೋಟರಿ ಸಂಸ್ಥೆಯಿಂದ ರಚನಾತ್ಮಕ, ಸಾಮಾಜಿಕ ಚಟುವಟಿಕೆ ನಡೆಯುತ್ತಿದ್ದು, ಪ್ರಸಕ್ತ ವರ್ಷ ಹೆಣ್ಣುಮಕ್ಕಳನ್ನು ಕಾಡುವ ಕರುಳುಬಳ್ಳಿ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಚುಚ್ಚಮದ್ದು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂರ‌್ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೇ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಜಿಲ್ಲೆಯಲ್ಲಿ ಚುಚ್ಚುಮದ್ದು ಅರಿವು ಕಾರ್ಯಕ್ರಮ ಈಗಾಗಲೇ ಹಮ್ಮಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನಲ್ಲಿ 10 ಸಾವಿರ ಗಿಡಗಳನ್ನು ನಾಟಿಮಾಡಿ ಮರಗಳನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಪ್ರತಿ ರೊಟೇರಿಯನ್‌ಗೆ ತಲಾ ಮೂರು ಗಿಡಗಳನ್ನು ನೆಡುವ ಹೊಣೆ ನೀಡಲಾಗಿದೆ ಎಂದರು.
ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ಅಂಗವಿಕಲರಿಗಾಗಿ ಶಾಲೆ ನಡೆಸಲಾಗುತ್ತಿದೆ. ಅಲ್ಲದೆ ಪಟ್ಟಣದ ರೋಟರಿ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅಲ್ಲದೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಅಪಘಾತ ಪ್ರದೇಶಗಳಲ್ಲಿ ಕನ್ನಡಿಗಳ ಅಳವಡಿಕೆ, ಬಸ್ ತಂಗುದಾಣಗಳ ನಿರ್ಮಾಣ ಹಾಗೂ ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಮಾಜಿಕ ಶ್ರೇಯೋಭಿವೃದ್ಧಿಗೆ ತನ್ನದೆ ಆದ ಕೂಡುಗೆ ನೀಡುತ್ತಿದೆ ಎಂದರು.
ಸಹಾಯಕ ಪ್ರಾಂತಪಾಲ ಸಿ.ಎಸ್.ಮಹೇಶ್ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ನಿರ್ಮೂಲನೆಗಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು. ರೋಟರಿ ಸಂಸ್ಥೆ ಅಧ್ಯಕ್ಷ ಕ್ಯಾನಹಳ್ಳಿ ಚಂದ್ರಶೇಖರ್, ರವಿಕುಮಾರ್, ವಿಜೇತ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.