

ಕಡೂರು: ಜನರ ಭಾವನೆಗಳಿಗೆ ಸ್ಪಂದಿಸುವ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ರೋಟರಿ ಸಂಸ್ಥೆ ನಿರಂತರವಾಗಿ ಶ್ರಮಿಸಲಿದೆ ಎಂದು ರೋಟರಿ ಜಿಲ್ಲಾ ಗೌರ್ವನರ್ ಬಿ.ಸಿ.ಗೀತಾ ಹೇಳಿದರು.
ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಮೀಪದ ಹಿಂದು ರುದ್ರಭೂಮಿಯಲ್ಲಿ ಮಂಗಳವಾರ ರೋಟರಿ ಸಂಸ್ಥೆ , ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ 65 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣನಾಗುತ್ತಿರುವ ಚಿತಾಗಾರ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಘಟಕದ ನಿರ್ಮಾಣದ ಕಾರ್ಯ ಪುಣ್ಯದ ಕೆಲಸವಾಗಿದೆ. ಮನುಷ್ಯನಿಗೆ ಸಾವು ಸಹಜ. ಆದರೆ ಅಂತ್ಯಸಂಸ್ಕಾರ ಸುವ್ಯವಸ್ಥಿತವಾಗಿ ಪುಣ್ಯದ ಸ್ಥಳಗಳಲ್ಲಿ ನಡೆಯಬೇಕು. ಕಾಮಗಾರಿ ಶೀಘ್ರ ಮುಕ್ತಾಯವಾಗಿ ಸಾಮಾನ್ಯ ಜನರಿಗೂ ಸದ್ಬಳಕೆಯಾಗಬೇಕು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪುರಸಭೆ ಸದಸ್ಯ ಭಂಡಾರಿ ಶ್ರೀ ನಿವಾಸ್ ಮಾತನಾಡಿ, ರುದ್ರಭೂಮಿಗೆ ಈಗಾಗಲೇ ನೀರಿನ ವ್ಯವಸ್ಥೆ, ರಸ್ತೆ, ವಿದ್ಯುತ್ ದೀಪಗಳ ಅಳವಡಿಕೆ, ಶೌಚಗೃಹ ಹಾಗೂ ಸ್ನಾನದ ಗೃಹ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮತ್ತಷ್ಟು ಒತ್ತು ನೀಡಲು ಕಡೂರಿನ ರೋಟರಿ ಸಂಸ್ಥೆ ಕೈ ಜೋಡಿಸಿರುವುದು ಶ್ಲಾಘನೀಯ. ಕ್ಷೇತ್ರದ ಶಾಸಕರ ಸಹಕಾರದಿಂದ ಶೀಘ್ರ ಕಾಮಗಾರಿ ಮುಕ್ತಾಯವಾಗಬೇಕಿದೆ ಎಂದು ತಿಳಿಸಿದರು.